Thu. Nov 19th, 2026

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿ; ಕಾಲೇಜುಗಳಲ್ಲಿ ಜಾತಿ-ಧರ್ಮದ ಭೇದಭಾವಕ್ಕೆ ಆಸ್ಪದ ನೀಡಬೇಡಿ: ಸಿಎಂ ಡಿ.ಕೆ. ಶಿವಕುಮಾರ್ ಕರೆ

Share this with Friends

ಬೆಂಗಳೂರು: ಪ್ರತಿಯೊಂದು ಮಗುವಿನಲ್ಲೂ ನಾಯಕತ್ವ ಗುಣ ಇರುತ್ತದೆ. ಕೇವಲ ಶಾಸಕರು, ಸಚಿವರ ಮಕ್ಕಳಷ್ಟೇ ಅಲ್ಲದೆ, ಜನಸಾಮಾನ್ಯರ ಮಕ್ಕಳೂ ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಶೈಕ್ಷಣಿಕ ಸಾರಥ್ಯ’ ಸಮಾರಂಭವನ್ನು ಉದ್ಘಾಟಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನೂತನವಾಗಿ ಆಯ್ಕೆಯಾದ 222 ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ಪ್ರದಾನ ಮಾಡಿ ಅವರು ಮಾತನಾಡಿದರು. “ನೂತನ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಸಮೂಹ ಹಾಗೂ ಸಮಾಜ ದೊಡ್ಡ ವಿಶ್ವಾಸವಿಟ್ಟಿದೆ. ನಾನು ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಾಗ, ಸಚಿವ ಮತ್ತು ಮುಖ್ಯಮಂತ್ರಿಯಾಗಿದ್ದಕ್ಕಿಂತಲೂ ಹೆಚ್ಚಿನ ಸಂತೋಷವಾಗಿತ್ತು. ವಿದ್ಯೆಯು ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ,” ಎಂದು ತಮ್ಮ ಅನುಭವ ಹಂಚಿಕೊಂಡರು.

ಒಂದು ಪುಸ್ತಕ, ಒಬ್ಬ ಶಿಕ್ಷಕ ದೇಶವನ್ನೇ ಬದಲಾಯಿಸಬಲ್ಲರು:

“ಒಂದು ಪುಸ್ತಕ, ಒಂದು ಲೇಖನಿ ಮತ್ತು ಒಬ್ಬ ಶಿಕ್ಷಕ ಇಡೀ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲರು. ಸೈನಿಕ, ಕೃಷಿಕ, ಕಾರ್ಮಿಕ ಮತ್ತು ಶಿಕ್ಷಕ ಸಮಾಜದ ನಾಲ್ಕು ಸ್ತಂಭಗಳಿದ್ದಂತೆ. ಈಗಿನ 5ಜಿ, 6ಜಿ ಮತ್ತು ಎಐ (AI) ಯುಗದಲ್ಲಿ ಮಕ್ಕಳು ಬಹಳ ಚುರುಕಾಗಿದ್ದಾರೆ. ರೇಸ್‌ನಲ್ಲಿ ಓಡುವ ಕುದುರೆಯನ್ನು ಮತ್ತಷ್ಟು ಓಡಿಸುವುದಕ್ಕಿಂತ, ಸಾಮಾನ್ಯವಾಗಿರುವವರನ್ನು (ಕತ್ತೆಯನ್ನು ಕುದುರೆ ಮಾಡುವಂತೆ) ಸಾಧಕರನ್ನಾಗಿ ರೂಪಿಸುವುದು ಶಿಕ್ಷಕರ ನಿಜವಾದ ಜವಾಬ್ದಾರಿ,” ಎಂದು ಸಿಎಂ ವಿಶ್ಲೇಷಿಸಿದರು.

ರ‌್ಯಾಗಿಂಗ್ ಮುಕ್ತ ಹಾಗೂ ಜಾತ್ಯತೀತ ಕ್ಯಾಂಪಸ್ ನಿರ್ಮಿಸಿ:

ಕಾಲೇಜುಗಳಲ್ಲಿ ಯಾವುದೇ ಧರ್ಮ, ಜಾತಿ, ದ್ವೇಷ ಅಥವಾ ಭೇದಭಾವಗಳು ಬೆಳೆಯಲು ಅವಕಾಶ ನೀಡಬಾರದು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅರಿವು ಹಾಗೂ ನಾಯಕತ್ವ ಬೆಳೆಸುವ ಉದ್ದೇಶದಿಂದಲೇ ಸರ್ಕಾರ ಕಾಲೇಜು ಚುನಾವಣೆಗಳನ್ನು ನಡೆಸಲು ನಿರ್ಧರಿಸಿದೆ. ಹೆಣ್ಣುಮಕ್ಕಳು ಇಂದು ಎಲ್ಲಾ ರಂಗಗಳಲ್ಲೂ ಮುಂದಿದ್ದು, ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವ ಜೊತೆಗೆ ಕ್ಯಾಂಪಸ್‌ಗಳನ್ನು ರ‌್ಯಾಗಿಂಗ್ ಮುಕ್ತವಾಗಿಸಬೇಕು ಎಂದು ಪ್ರಾಂಶುಪಾಲರಿಗೆ ಕಿವಿಮಾತು ಹೇಳಿದರು.

ಪಂಚಾಯಿತಿ ಮಟ್ಟದಲ್ಲಿ 2,000 ಸರ್ಕಾರಿ ಶಾಲೆಗಳ ದತ್ತು:

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸಿಎಸ್‌ಆರ್ (CSR) ನಿಧಿಯಡಿ ರಾಜ್ಯದ ಪಂಚಾಯಿತಿ ಮಟ್ಟದಲ್ಲಿ 2,000 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗುತ್ತಿದೆ. ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಶಾಲೆಗಳನ್ನು ದತ್ತು ಪಡೆಯಲಾಗಿದ್ದು, ಸಚಿವ ಬಾಲಕೃಷ್ಣ ಅವರ ಕ್ಷೇತ್ರದಲ್ಲಿ ತಲಾ 13-14 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆ 400ರಿಂದ 2,000ಕ್ಕೆ ಏರಿಕೆಯಾಗಿದೆ. ಶಿಕ್ಷಕರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ನಾಡಿನ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಸಿಎಂ ಕರೆ ನೀಡಿದರು.

 


Share this with Friends

Related Post