Thu. Nov 19th, 2026

ಮೇಕೆದಾಟು ವಿಚಾರದಲ್ಲಿ ಇಡೀ ರಾಜ್ಯ ಒಂದಾಗಿದೆ; ಅಸೂಯೆಯ ಮಾತುಗಳಿಗೆ ಕಿವಿಗೊಡಬೇಕಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯದ ಎಲ್ಲರೂ ಪಕ್ಷಭೇದ ಮರೆತು ಒಂದೇ ಧ್ವನಿಯಲ್ಲಿ ಬೆಂಬಲ ನೀಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೂಡ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗಿರುವಾಗ ಕೆಲವರು ಅಸೂಯೆಯಿಂದ ಮಾತನಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದ ಜ್ಞಾನಜ್ಯೋತಿ ಸಭಾಂಗಣ ಹಾಗೂ ನೆಹರು ತಾರಾಲಯದ ಬಳಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದರು. “ಕುಮಾರಸ್ವಾಮಿ ಅವರೂ ಮೇಕೆದಾಟು ಯೋಜನೆ ಆಗಬೇಕು ಎಂದಿದ್ದಾರೆ. ಒಂದೇ ದಿನದಲ್ಲಿ ಅನುಮತಿ ತೆಗೆದುಕೊಂಡು ಬರುತ್ತೇನೆ ಎಂದಿದ್ದರು. ಅವರು ಆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಆದರೆ, ಅವರ ತಂದೆ ಪತ್ರ ಬರೆದಿದ್ದರೆ, ಮಗ ಅಸೂಯೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ,” ಎಂದರು.

ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ:

ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್‌ನಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ. ಕರ್ನಾಟಕ ತನ್ನ ವ್ಯಾಪ್ತಿಯಲ್ಲಿ ಅಣೆಕಟ್ಟು ನಿರ್ಮಿಸಿಕೊಳ್ಳಬಹುದು ಹಾಗೂ ತಮಿಳುನಾಡಿಗೆ ಸಲ್ಲಬೇಕಾದ ನೀರನ್ನು ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯೂ ತಿರಸ್ಕೃತವಾಗಿದೆ. ಸದ್ಯ ನಾವು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿದ್ದು, ಅರಣ್ಯ ಭೂಮಿಗೆ ಪರ್ಯಾಯ ಭೂಮಿ ಒದಗಿಸಲು ಸಿದ್ಧತೆ ನಡೆಸಿದ್ದೇವೆ. ತಮಿಳುನಾಡಿನವರು ಕೆಳಭಾಗದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ ನಾವು ಖ್ಯಾತೆ ತೆಗೆಯಲು ಹೋಗಿಲ್ಲ ಎಂದು ಹೇಳಿದರು.

ಕುಡಿಯುವ ನೀರಿಗೆ ಮಾತ್ರ ಬಳಕೆ; ಕೃಷಿಗೆ ಬಳಸಲ್ಲ:

ಮೇಕೆದಾಟು ಯೋಜನೆ ಯಾವುದೇ ಒಂದು ಪಕ್ಷದ ವಿಚಾರವಲ್ಲ, ಇದು ಇಡೀ ರಾಜ್ಯದ ಹಿತಾಸಕ್ತಿ. ಇದರಿಂದ ಮಂಡ್ಯ, ಹಾಸನ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಿಗೆ ನೇರ ಅನುಕೂಲವಾಗಲಿದ್ದು, ಪ್ರಮುಖವಾಗಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಬರಗಾಲದ ಸಂದರ್ಭದಲ್ಲಿ ತಮಿಳುನಾಡಿಗೆ 66 ಟಿಎಂಸಿ ನೀರು ಬಿಡಬೇಕಾದಾಗ ಈ ಜಲಾಶಯ ನೆರವಾಗಲಿದೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ಇದರ ಮುಖ್ಯ ಉದ್ದೇಶವೇ ಹೊರತು, ಕೃಷಿ ಉದ್ದೇಶಕ್ಕೆ ಈ ನೀರನ್ನು ಬಳಸುವ ಪ್ರಸ್ತಾಪವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಪ್ರತಿ ತಿಂಗಳು ಇಂದಿರಾ ಕ್ಯಾಂಟೀನ್ ಆಹಾರ ಗುಣಮಟ್ಟ ಪರೀಕ್ಷೆ:

ಇದೇ ವೇಳೆ ಮಾತನಾಡಿದ ಸಿಎಂ, ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ ಮತ್ತು ಬಿಸಿಯೂಟ ಯೋಜನೆಗಳು ನಮ್ಮ ಹೃದಯಕ್ಕೆ ಹತ್ತಿರವಾದವು. ಪ್ರತಿ ತಿಂಗಳು ಶಾಸಕರು, ಅಧಿಕಾರಿಗಳು ಹಾಗೂ ಪ್ರತಿದಿನ ನೌಕರರು ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ, ಅಲ್ಲಿಯೇ ಊಟ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲಿಸುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಅಲ್ಲದೆ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಸಂಘಟನೆಯ ನಾಯಕರನ್ನು ಮಾತುಕತೆಗೆ ಆಹ್ವಾನಿಸಿರುವುದಾಗಿ ಹೇಳಿದರು.

 


Share this with Friends

Related Post