Thu. Nov 19th, 2026

ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಸಾಮೂಹಿಕ ಟಿಕೆಟ್ ಬುಕಿಂಗ್ ನಿಯಮಗಳನ್ನು ಸರಳೀಕರಿಸಿದ ನೈಋತ್ಯ ರೈಲ್ವೆ

Share this with Friends

ಹುಬ್ಬಳ್ಳಿ: ಒಟ್ಟಾಗಿ ಪ್ರಯಾಣಿಸುವ ಗುಂಪು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಸಾಮೂಹಿಕ ಟಿಕೆಟ್ ಬುಕಿಂಗ್ (Bulk / Group Booking) ನಿಯಮಗಳನ್ನು ಸರಳೀಕರಿಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ನಿಯಮಗಳ ಅಡಿಯಲ್ಲಿ ಬರ್ತ್‌ಗಳ ಸಂಖ್ಯೆಯ ಮೇಲಿದ್ದ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ಮಾರ್ಗಸೂಚಿಯ ಪ್ರಮುಖಾಂಶಗಳು:

ಬರ್ತ್‌ಗಳ ಮಿತಿ ರದ್ದು: ಸಾಮೂಹಿಕ ಕಾಯ್ದಿರಿಸುವಿಕೆಯ (Bulk Reservation) ಅಡಿಯಲ್ಲಿ ಅನುಮತಿಸಲಾಗುವ ಬರ್ತ್‌ಗಳ ಸಂಖ್ಯೆಗೆ ಇನ್ಮುಂದೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಅಲ್ಲದೆ, ಈ ಹಿಂದೆ ಇದ್ದ ಅಧಿಕಾರ ಹಂಚಿಕೆ ಮತ್ತು ಮಿತಿಗಳನ್ನು ಹಿಂಪಡೆಯಲಾಗಿದ್ದು, ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (CRS) ಅಥವಾ ನಿಲ್ದಾಣದ ವ್ಯವಸ್ಥಾಪಕರಿಗೆ (SM) ನೇರವಾಗಿ ಅನುಮತಿ ನೀಡುವ ಅಧಿಕಾರ ನೀಡಲಾಗಿದೆ.

ಯಾರಿಗೆಲ್ಲಾ ಈ ಸೌಲಭ್ಯ?: ಮದುವೆ ದಿಬ್ಬಣಗಳು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಕ್ರೀಡಾ ತಂಡಗಳು ಮತ್ತು ಸಾಂಸ್ಕೃತಿಕ ತಂಡಗಳಂತಹ ನೈಜ ಉದ್ದೇಶಗಳಿಗಾಗಿ ಒಟ್ಟಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಎಲ್ಲಾ ದರ್ಜೆಗಳಲ್ಲಿ (Confirmed, RAC ಅಥವಾ Waitlisted) ಈ ಸೌಲಭ್ಯ ಲಭ್ಯವಿರುತ್ತದೆ.

ಬುಕಿಂಗ್ ಸಮಯ ಮತ್ತು ಸ್ಥಳ: ಮುಂಗಡ ಕಾಯ್ದಿರಿಸುವಿಕೆ ಅವಧಿಯ (ARP) ಟಿಕೆಟ್ ಬುಕಿಂಗ್ ಆರಂಭವಾದ ಒಂದು ಗಂಟೆಯ ನಂತರ, ಅಂದರೆ ಬೆಳಿಗ್ಗೆ 09:00 ಗಂಟೆಯಿಂದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾತ್ರ ಗುಂಪು ಬುಕಿಂಗ್‌ಗೆ ಅವಕಾಶ ನೀಡಲಾಗುವುದು.

ನೇರ ಅರ್ಜಿ ಕಡ್ಡಾಯ: ವಿದೇಶಿ ಪ್ರವಾಸಿಗರು ಮತ್ತು ಅನಿವಾಸಿ ಭಾರತೀಯರನ್ನು (NRI) ಹೊರತುಪಡಿಸಿ, ಉಳಿದಂತೆ ಯಾವುದೇ ಟ್ರಾವೆಲ್ ಏಜೆಂಟ್‌ಗಳ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿದಾರರು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.

ಪ್ರಯಾಣಿಕರ ವಿವರ ಅಗತ್ಯ: ಅರ್ಜಿ ಸಲ್ಲಿಸುವ ಸಮಯದಲ್ಲೇ ಪ್ರಯಾಣದ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಬೇಕು ಹಾಗೂ ಎಲ್ಲಾ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಮತ್ತು ವಿಳಾಸವನ್ನು ಒದಗಿಸುವುದು ಕಡ್ಡಾಯವಾಗಿದೆ.

ರಿಟರ್ನ್ ಜರ್ನಿಗೂ ಅವಕಾಶ:

ಒಂದೇ ಕಾಯ್ದಿರಿಸುವಿಕೆ ಕಚೇರಿಯಲ್ಲಿ ವಾಪಸ್ ಪ್ರಯಾಣಕ್ಕೂ (Return Journey) ಗುಂಪು ಬುಕಿಂಗ್ ಮಾಡಲು ಅವಕಾಶವಿದ್ದು, ಅದನ್ನು ಪ್ರತ್ಯೇಕ ಪ್ರಯಾಣವೆಂದು ಪರಿಗಣಿಸಲಾಗುತ್ತದೆ. ಈ ಸೌಲಭ್ಯವು ದುರುಪಯೋಗವಾಗದಂತೆ ತಡೆಯಲು ಹಾಗೂ ನೈಜ ಗುಂಪುಗಳಿಗೆ ಮಾತ್ರ ಸಿಗುವಂತೆ ಖಚಿತಪಡಿಸಿಕೊಳ್ಳಲು CRS ಮತ್ತು SM ಅಧಿಕಾರಿಗಳು ಪ್ರತ್ಯೇಕ ವಹಿಯನ್ನು ನಿರ್ವಹಿಸಿ, ಅರ್ಜಿ ಮತ್ತು ಪ್ರಯಾಣಿಕರ ಪಟ್ಟಿಯ ಪ್ರತಿ ಪುಟಕ್ಕೂ ಸಹಿ ಹಾಗೂ ಮುದ್ರೆ ಹಾಕಲಿದ್ದಾರೆ.

 


Share this with Friends

Related Post