ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಬೆಳಗಾವಿ ವಿಧಾನಮಂಡಲ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ರೈತರಿಗೆ ಸಂಪೂರ್ಣ ಬರ ಪರಿಹಾರಧನವನ್ನು ಬಿಡುಗಡೆ ಮಾಡದಿದ್ದರೆ, ಸದನ ಹೇಗೆ ನಡೆಯುತ್ತದೆ ಎಂಬುದನ್ನು ವಿರೋಧ ಪಕ್ಷವಾಗಿ ನಾವು ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿಯಿಂದ ತತ್ತರಿಸಿರುವ ರೈತರು ಮಾನಸಿಕ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳಿಗೆ ಮುಂದಾಗುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಯಾವುದೇ ಷರತ್ತುಗಳನ್ನು ವಿಧಿಸಿ ವಿಳಂಬ ಮಾಡದೆ, ರಾಜ್ಯದ 50 ಲಕ್ಷ ರೈತರಿಗೆ ತಕ್ಷಣವೇ ಪೂರ್ಣ ಪ್ರಮಾಣದ ಪರಿಹಾರ ಹಣವನ್ನು ತಲುಪಿಸಬೇಕು ಎಂದು ಆಗ್ರಹಿಸಿದರು.
ಪರಿಹಾರ ಮೊತ್ತದ ಗೊಂದಲ ಬಗೆಹರಿಸಿ:
ಬರ ಪರಿಹಾರ ಘೋಷಣೆಯಲ್ಲಿ ಸರ್ಕಾರವೇ ಗೊಂದಲ ಸೃಷ್ಟಿಸಿದೆ ಎಂದು ವಿಜಯೇಂದ್ರ ಟೀಕಿಸಿದರು. “ಸರ್ಕಾರ ಮೊದಲು ₹2,500 ಪರಿಹಾರ ಎಂದು ಘೋಷಿಸಿ, ನಂತರ ₹5,000 ಎನ್ನುತ್ತಿದೆ. ಅಲ್ಲದೆ, ಮುಖ್ಯಮಂತ್ರಿಗಳು ಪ್ರತಿ ಎಕರೆಗೆ ಪರಿಹಾರ ನೀಡುವುದಾಗಿ ಹೇಳಿದರೆ, ಕಂದಾಯ ಸಚಿವರು ಪ್ರತಿ ಹೆಕ್ಟೇರ್ಗೆ ಪರಿಹಾರ ಎಂದು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಮೊದಲು ಈ ಗೊಂದಲವನ್ನು ಸ್ಪಷ್ಟಪಡಿಸಿ, ರೈತರಿಗೆ ₹5,000 ಪರಿಹಾರಧನವನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮತ್ತು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಉಪಸ್ಥಿತರಿದ್ದರು.

