Sat. Nov 21st, 2026

‘ಬಸವ ಮಂಟಪ’ ವಿವಾದ: ಸರ್ಕಾರದ ಎಫ್‌ಐಆರ್ ಕ್ರಮವನ್ನು ಖಂಡಿಸಿದ ನಟ ಚೇತನ್ ಅಹಿಂಸಾ

Share this with Friends

ಬೆಂಗಳೂರು:’ಬಸವ ಮಂಟಪ’ ಪುಸ್ತಕದ ವಿಚಾರವಾಗಿ ಲೇಖಕ ರವಿ ಹಂಜ್ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧ ರಾಜ್ಯ ಸರ್ಕಾರ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿರುವ ಕ್ರಮವನ್ನು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತೀವ್ರವಾಗಿ ಖಂಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತುಗಳನ್ನು ಅಪರಾಧವೆಂದು ಪರಿಗಣಿಸಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದು ಖಂಡನೀಯ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಬೇಕು:

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಚೇತನ್ ಅಹಿಂಸಾ, “ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಅವರ ವಿಚಾರಗಳಲ್ಲಿ ಹೆಚ್ಚಿನ ಬೌದ್ಧಿಕ ಆಳ ಇಲ್ಲದಿರಬಹುದು. ಆದರೂ ಅವರು ಬಸವಣ್ಣನವರ ಕುರಿತಾದ ಚರ್ಚೆಯನ್ನು ತಮ್ಮದೇ ಆದ ಪ್ರಚೋದನಾತ್ಮಕ ಶೈಲಿಯಲ್ಲಿ ಮುಂದುವರಿಸಿದ್ದಾರೆ. ಅವರು ದ್ವೇಷದ ಭಾಷಣ (Hate Speech) ಮಾಡದಿರುವವರೆಗೆ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸಾಂವಿಧಾನಿಕ ಹಕ್ಕು ಅವರಿಗೆ ಇರಲೇಬೇಕು. ಯಾವುದೇ ಸಮರ್ಥ ಕಾರಣವಿಲ್ಲದೆ ಸರ್ಕಾರ ಎರಡು ಎಫ್‌ಐಆರ್‌ ದಾಖಲಿಸಿ ದರ್ಪ ತೋರಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶರಣರ ಮಾರ್ಗ ಮತ್ತು ಪ್ರಜಾಪ್ರಭುತ್ವ:

“21ನೇ ಶತಮಾನದ ಬಸವಣ್ಣ ಮತ್ತು ಶರಣರ ನಿಜವಾದ ಅನುಯಾಯಿಗಳು 12ನೇ ಶತಮಾನದ ಕ್ರಾಂತಿಯ ಕುರಿತು ಭಿನ್ನಾಭಿಪ್ರಾಯಗಳು ವ್ಯಕ್ತವಾಗಲು ಮುಕ್ತ ಅವಕಾಶ ನೀಡುತ್ತಾರೆ. ಇಂತಹ ಭಿನ್ನ ನಿಲುವುಗಳನ್ನು ಗುರುತಿನ ರಾಜಕಾರಣದ ಕನ್ನಡಕದಿಂದ ನೋಡುವ ಬದಲು, ಸಂವಿಧಾನದ ಆಶಯ ಮತ್ತು ತತ್ವಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು. ವಿಚಾರಗಳ ವೇದಿಕೆಯಲ್ಲಿ ಭಿನ್ನಾಭಿಪ್ರಾಯಗಳು ಚರ್ಚೆಯಾಗಲು ಅವಕಾಶ ನೀಡುವುದೇ ನಿಜವಾದ ಪ್ರಜಾಪ್ರಭುತ್ವ ಹಾಗೂ ಶರಣರ ಮಾರ್ಗವಾಗಿದೆ” ಎಂದು ಚೇತನ್ ಪ್ರತಿಪಾದಿಸಿದ್ದಾರೆ.

 

 


Share this with Friends

Related Post