ಬೆಂಗಳೂರು: ಅಗ್ನಿಶಾಮಕ, ಅರಣ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 1,531 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಗಡುವಿನೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಉಳಿಕೆ ಮೂಲ ವೃಂದದ 1,311 ಹಾಗೂ ಕಲ್ಯಾಣ ಕರ್ನಾಟಕ ವೃಂದದ 220 ಹುದ್ದೆಗಳು ಒಳಗೊಂಡಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.
ಇಲಾಖಾವಾರು ಹುದ್ದೆಗಳ ವಿವರ
ಅಗ್ನಿಶಾಮಕ ಇಲಾಖೆ: ಅಗ್ನಿಶಾಮಕ ಸಿಬ್ಬಂದಿ (470) ಮತ್ತು ಅಗ್ನಿಶಾಮಕ ಅಧಿಕಾರಿ (20)
ಅರಣ್ಯ ಇಲಾಖೆ: ಅರಣ್ಯ ರಕ್ಷಕರು (450)
ಕಾನೂನು ಇಲಾಖೆ: ಸರ್ಕಾರಿ ಅಭಿಯೋಜಕರು ಹಾಗೂ ಸಹಾಯಕ ಸರ್ಕಾರಿ ವಕೀಲರು (320)
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಮಹಿಳಾ ಮೇಲ್ವಿಚಾರಕಿ (171)
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ: ಕೈಗಾರಿಕಾ ವಿಸ್ತರಣಾಧಿಕಾರಿ (35), ರೇಷ್ಮೆ ನಿರೀಕ್ಷಕರು (34), ಜವಳಿ ನಿರೀಕ್ಷಕರು (27) ಮತ್ತು ಮಾರುಕಟ್ಟೆ ಮೇಲ್ವಿಚಾರಕರು (4)
ಆಯ್ಕೆ ವಿಧಾನ ಮತ್ತು ಪರೀಕ್ಷಾ ವೇಳಾಪಟ್ಟಿ
ಅಗ್ನಿಶಾಮಕ ಸಿಬ್ಬಂದಿ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ; ಬದಲಾಗಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇರ ಆಯ್ಕೆ ನಡೆಯಲಿದೆ. ಉಳಿದ ಎಲ್ಲಾ ಹುದ್ದೆಗಳಿಗೆ ಮುಂಬರುವ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಪರೀಕ್ಷೆಯ ನಿಖರ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು ಹಾಗೂ ಅರ್ಜಿ ಸಲ್ಲಿಸುವ ಮುನ್ನ ಆಯಾ ಇಲಾಖೆಗಳ ಪ್ರತ್ಯೇಕ ಅಧಿಸೂಚನೆಗಳನ್ನು ಸಂಪೂರ್ಣವಾಗಿ ಓದಿ ಖಚಿತಪಡಿಸಿಕೊಳ್ಳಬೇಕು ಎಂದು ಎಚ್. ಪ್ರಸನ್ನ ಸಲಹೆ ನೀಡಿದ್ದಾರೆ.

