Sun. Nov 22nd, 2026

ಮಲೆನಾಡಿನ ಬಾನಂಗಳದಲ್ಲಿ ಮೌನ; ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಾರಾಟ ಸ್ಥಗಿತ!

Share this with Friends

ಶಿವಮೊಗ್ಗ: ಮಲೆನಾಡಿನ ಅಭಿವೃದ್ಧಿಯ ಕನಸಿಗೆ ರೆಕ್ಕೆ ಕಟ್ಟಿದ್ದ ಶಿವಮೊಗ್ಗದ ಸೋಗಾನೆಯ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಸದ್ಯ ವಿಮಾನಗಳ ಸದ್ದು ನಿಂತುಹೋಗಿದೆ. ಅತ್ಯಂತ ವೈಭವದಿಂದ ಉದ್ಘಾಟನೆಗೊಂಡು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಪಡೆಯುತ್ತಿದ್ದ ವಿಮಾನ ನಿಲ್ದಾಣದಲ್ಲಿ ಇದೀಗ ವಾಣಿಜ್ಯ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದು ಜಿಲ್ಲೆಯ ಜನರು ಮತ್ತು ಉದ್ಯಮಿಗಳಲ್ಲಿ ನಿರಾಸೆ ಮೂಡಿಸಿದೆ.

ಹಾರಾಟ ನಿಲ್ಲಲು ಅಸಲಿ ಕಾರಣವೇನು?

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಾದೇಶಿಕ ಸಂಪರ್ಕ ಯೋಜನೆಯಾದ ‘ಉಡಾನ್’ (UDAN) ಅಡಿಯಲ್ಲಿ ಸಣ್ಣ ನಗರಗಳಿಗೆ ವಿಮಾನ ಸೇವೆ ಒದಗಿಸುವ ಸಂಸ್ಥೆಗಳಿಗೆ 3 ವರ್ಷಗಳ ಕಾಲ ಆರ್ಥಿಕ ಸಹಾಯಧನ (ಸಬ್ಸಿಡಿ) ನೀಡಲಾಗುತ್ತಿತ್ತು. ಇದೀಗ ಆ 3 ವರ್ಷಗಳ ಒಪ್ಪಂದದ ಅವಧಿ ಮುಕ್ತಾಯಗೊಂಡಿದೆ. ಸಬ್ಸಿಡಿ ಸ್ಥಗಿತಗೊಂಡ ಬೆನ್ನಲ್ಲೇ ಕಾರ್ಯಾಚರಣೆ ವೆಚ್ಚ ಭರಿಸುವುದು ಕಷ್ಟಕರ ಎಂಬ ಕಾರಣ ನೀಡಿ ವಿಮಾನಯಾನ ಸಂಸ್ಥೆಗಳು ಶಿವಮೊಗ್ಗದಿಂದ ತಮ್ಮ ಸೇವೆಗಳನ್ನು ಹಿಂಪಡೆದಿವೆ.

ಒಂದೊಂದೇ ಸಂಸ್ಥೆಗಳ ನಿರ್ಗಮನ:

ಆರಂಭದಲ್ಲಿ ಬೆಂಗಳೂರು, ಹೈದರಾಬಾದ್, ತಿರುಪತಿ, ಗೋವಾ ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಸೇವೆ ಆರಂಭವಾಗಿತ್ತು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಪರಿಸ್ಥಿತಿ ಬದಲಾಗತೊಡಗಿತು. ಮೊದಲಿಗೆ ಇಂಡಿಗೋ (IndiGo) ತನ್ನ ಸೇವೆಯನ್ನು ಸ್ಥಗಿತಗೊಳಿಸಿದರೆ, ನಂತರ ಸ್ಪೈಸ್‌ಜೆಟ್ (SpiceJet) ಕೂಡ ಹಾರಾಟ ನಿಲ್ಲಿಸಿತು. ಕೊನೆಯದಾಗಿ ಸೇವೆ ನೀಡುತ್ತಿದ್ದ ಸ್ಟಾರ್ ಏರ್ (Star Air) ಸಂಸ್ಥೆಯು ಸಹ ತನ್ನ ಉಡಾನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ನವೆಂಬರ್ 20ರಂದು ಕೊನೆಯ ಹಾರಾಟ ನಡೆಸಿ, ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ನಿಲ್ದಾಣದ ರನ್‌ವೇ ಸದ್ಯ ಬಿಕೋ ಎನ್ನುತ್ತಿದೆ.

ಮುಂದಿನ 3-4 ತಿಂಗಳು ವಿಮಾನ ಸೇವೆ ಅನುಮಾನ:

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (KSIIDC) ಮೂಲಗಳ ಪ್ರಕಾರ, ಹೊಸ ವಿಮಾನಯಾನ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಮತ್ತೆ ಹಾರಾಟ ಆರಂಭಿಸಲು ಕನಿಷ್ಠ 3 ರಿಂದ 4 ತಿಂಗಳ ಕಾಲಾವಕಾಶ ಬೇಕಾಗಬಹುದು. ಈಗಾಗಲೇ ಉಡಾನ್ ಯೋಜನೆಯ ಮುಂದಿನ ಹಂತದಡಿ ಶಿವಮೊಗ್ಗದಿಂದ ಸುಮಾರು 10ಕ್ಕೂ ಹೆಚ್ಚು ಹೊಸ ಮಾರ್ಗಗಳಿಗೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಮಲೆನಾಡಿನ ಆಕಾಶದಲ್ಲಿ ಮತ್ತೆ ಲೋಹದ ಹಕ್ಕಿಗಳು ಹಾರಾಡಲಿವೆ.

ಸಿಬ್ಬಂದಿ ಭವಿಷ್ಯ ಮತ್ತು ಜನರ ನಿರೀಕ್ಷೆ:

ವಿಮಾನ ಹಾರಾಟ ಸ್ಥಗಿತಗೊಂಡಿದ್ದರೂ, ನಿಲ್ದಾಣದ ನಿರ್ವಹಣೆಯಲ್ಲಿ ತೊಡಗಿರುವ ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯದೆ ಮುಂದುವರಿಸಲು ನಿಗಮ ನಿರ್ಧರಿಸಿರುವುದು ಸಮಾಧಾನಕರ ಸಂಗತಿಯಾಗಿದೆ. ಆದರೂ, ವ್ಯಾಪಾರ-ವಹಿವಾಟು, ಪ್ರವಾಸೋದ್ಯಮ ಮತ್ತು ತುರ್ತು ವೈದ್ಯಕೀಯ ಕಾರಣಗಳಿಗಾಗಿ ವಿಮಾನಯಾನವನ್ನೇ ಅವಲಂಬಿಸಿದ್ದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ಉತ್ತರ ಕನ್ನಡ ಭಾಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಿ, ಸಬ್ಸಿಡಿ ರಹಿತವಾಗಿ ಅಥವಾ ವಿಶೇಷ ಪ್ಯಾಕೇಜ್ ಮೂಲಕ ಆದಷ್ಟು ಬೇಗ ವಿಮಾನ ಸೇವೆ ಪುನರಾರಂಭಿಸಬೇಕು ಎಂಬುದು ಮಲೆನಾಡಿಗರ ಒಕ್ಕೊರಲ ಆಗ್ರಹವಾಗಿದೆ.

ಆರೋಪ-ಪ್ರತ್ಯಾರೋಪ:

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡ ವಿಚಾರವಾಗಿ ಸಂಸದ ಬಿವೈ ರಾಘವೇಂದ್ರ  ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ನಡುವೆ ತೀವ್ರ ರಾಜಕೀಯ ವಾಕ್ಸಮರ ನಡೆದಿದೆ.

ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರತಿಕ್ರಿಯೆ:

ರಾಜ್ಯ ಸರ್ಕಾರದ ತಾರತಮ್ಯದ ಆರೋಪ: ಬೀದರ್ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆ ಮುಂದುವರಿಸಲು ರಾಜ್ಯ ಸರ್ಕಾರವು ‘ವಯಬಿಲಿಟಿ ಗ್ಯಾಪ್ ಫಂಡಿಂಗ್’ (VGF – ಆರ್ಥಿಕ ನೆರವು) ನೀಡುತ್ತಿದೆ. ಅದೇ ಮಾದರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಬೇಕು. ಅಲ್ಲಿನ ಉಸ್ತುವಾರಿ ಸಚಿವರು ತೋರಿದ ಆಸಕ್ತಿಯನ್ನು ಶಿವಮೊಗ್ಗ ಉಸ್ತುವಾರಿ ಸಚಿವರೂ ತೋರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸ್ಟಾರ್ ಏರ್ ಪ್ರಸ್ತಾವನೆ: ಸ್ಟಾರ್ ಏರ್ ಸಂಸ್ಥೆಯು ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ತಿರುಪತಿ ಮತ್ತು ಗೋವಾ ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲು ಸಿದ್ಧವಿದ್ದು, ಸರ್ಕಾರಕ್ಕೆ ಪತ್ರವನ್ನೂ ಬರೆದಿದೆ. ಈ ಪೈಕಿ ಕನಿಷ್ಠ ಎರಡು ಮಾರ್ಗಗಳಲ್ಲಾದರೂ ತಕ್ಷಣವೇ ಸೇವೆ ಆರಂಭಿಸಲು ಸಹಕರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ಈ ಕುರಿತು ಸಿಎಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

ಸಚಿವ ಎಂ.ಬಿ ಪಾಟೀಲ್  ಅವರ ತಿರುಗೇಟು:

ಕೇಂದ್ರದ ಉಡಾನ್ ನೀತಿಯೇ ಕಾರಣ: ಶಿವಮೊಗ್ಗ ವಿಮಾನ ನಿಲ್ದಾಣದ ಸ್ಥಗಿತಕ್ಕೆ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ. ಉಡಾನ್ ಯೋಜನೆಯ 3 ವರ್ಷಗಳ ಸಬ್ಸಿಡಿ ಅವಧಿ ಮುಗಿದಿರುವುದೇ ಇದಕ್ಕೆ ಅಸಲಿ ಕಾರಣ. ಈ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಬರೋಬ್ಬರಿ 17 ವಿಮಾನ ನಿಲ್ದಾಣಗಳು ಬಂದ್ ಆಗಿವೆ ಎಂಬುದನ್ನು ಸಂಸದರು ಗಮನಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ: ಉಡಾನ್ ಸಬ್ಸಿಡಿ ಅವಧಿಯನ್ನು 3 ವರ್ಷದಿಂದ 5 ವರ್ಷಗಳಿಗೆ ವಿಸ್ತರಿಸಬೇಕು ಮತ್ತು ನಂತರದ 5 ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾನ ವೆಚ್ಚ ಭರಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸಲಿಲ್ಲ. ಈಗ ರಾಜ್ಯ ಸರ್ಕಾರವೇ ತನ್ನದೇ ಆದ ನೂತನ ನಾಗರಿಕ ವಿಮಾನಯಾನ ನೀತಿಯನ್ನು (Civil Aviation Policy) ಜಾರಿಗೆ ತರಲು ಸಿದ್ಧತೆ ನಡೆಸಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಕಾಂಗ್ರೆಸ್ ನಾಯಕರ ಆರೋಪ:

ಇತ್ತ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್ ಕೂಡ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದು, “ಕೇಂದ್ರ ವಿಮಾನಯಾನ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಬದಲು ಸಂಸದರು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

 


Share this with Friends

Related Post