Sun. Nov 22nd, 2026

ಇತ್ತ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ, ಅತ್ತ ಸಿಎಂ ಡಿಕೆಶಿ ಜಪಾನ್ ಪ್ರವಾಸ!

Share this with Friends

ಬೆಂಗಳೂರು/ಬೀದರ್: ರಾಜ್ಯದಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಬೇಡಿಕೆಯನ್ನು ಮುಂದೂಡುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 25 ರವರೆಗೆ ಜಪಾನ್ ಪ್ರವಾಸ ಕೈಗೊಂಡಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯಕ್ಕೆ ವಿದೇಶಿ ಬಂಡವಾಳ ಆಕರ್ಷಿಸುವುದು ಹಾಗೂ ಜಪಾನ್‌ನ ನಗರಾಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಮತ್ತು ಮೂಲಸೌಕರ್ಯ ಮಾದರಿಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಸಿಎಂ ನೇತೃತ್ವದ ಉನ್ನತ ಮಟ್ಟದ ನಿಯೋಗ ಜಪಾನ್‌ಗೆ ತೆರಳುತ್ತಿದೆ. ನವೆಂಬರ್ 23ರಂದು ನಗೋಯಾ, 24ರಂದು ಒಸಾಕಾ ಹಾಗೂ 25ರಂದು ಟೋಕಿಯೋ ನಗರಗಳಿಗೆ ಭೇಟಿ ನೀಡಲಿರುವ ಈ ನಿಯೋಗದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಆಶಾ ಕಾರ್ಯಕರ್ತೆಯರ ತೀವ್ರ ಅಸಮಾಧಾನ:

ಇತ್ತ ಕಳೆದ ಒಂದು ವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಮಾಸಿಕ ₹15,000 ನಿಶ್ಚಿತ ಗೌರವಧನಕ್ಕಾಗಿ ಚಳಿ, ಗಾಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಗುರುವಾರವಷ್ಟೇ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿದ್ದ ಸಿಎಂ ಡಿ.ಕೆ. ಶಿವಕುಮಾರ್, ರಾಜ್ಯದ ಆರ್ಥಿಕ ಮಿತಿಯ ಬಗ್ಗೆ ವಿವರಿಸಿ, ಸಚಿವ ಸಂಪುಟ ಹಾಗೂ ಮುಂದಿನ ಅಧಿವೇಶನದಲ್ಲಿ ಚರ್ಚಿಸುವುದಾಗಿ ಹೇಳಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು.

ಆದರೆ, ಸಿಎಂ ಅವರ ಈ ಭರವಸೆಯನ್ನು ತಿರಸ್ಕರಿಸಿ ಧರಣಿ ಮುಂದುವರಿಸಿರುವ ಆಶಾ ಕಾರ್ಯಕರ್ತೆಯರು ಮತ್ತು ಸಂಘಟನೆಯ ಮುಖಂಡರು, ಮುಖ್ಯಮಂತ್ರಿಗಳ ವಿದೇಶ ಪ್ರವಾಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ರಾಜ್ಯದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿ ದುಡಿಯುತ್ತಿರುವ ಮಹಿಳೆಯರು ಬೀದಿಯಲ್ಲಿ ಕುಳಿತು ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ನಮ್ಮ ಸಮಸ್ಯೆಗೆ ಸ್ಪಷ್ಟ ಆದೇಶ ನೀಡಲು ಸರ್ಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. ಆದರೆ, ಮುಖ್ಯಮಂತ್ರಿಗಳು ಮತ್ತು ಸಚಿವರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ನಮ್ಮ ಬದುಕಿನ ಪ್ರಶ್ನೆ ಬಗೆಹರಿಸದೆ ವಿದೇಶಕ್ಕೆ ತೆರಳುತ್ತಿರುವುದು ಸರಿಯಲ್ಲ; ಸರ್ಕಾರ ಲಿಖಿತ ಆದೇಶ ಹೊರಡಿಸುವವರೆಗೂ ಫ್ರೀಡಂ ಪಾರ್ಕ್‌ನಿಂದ ಕದಲುವುದಿಲ್ಲ” ಎಂದು ಪ್ರತಿಭಟನಾನಿರತ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ.

‘ಅವರು ನಮ್ಮ ಇಲಾಖೆಯ ಕುಟುಂಬಸ್ಥರು’ – ಬೀದರ್‌ನಲ್ಲಿ ಖಾದರ್ ಸಮಾಧಾನ:

ಈ ನಡುವೆ, ಭಾನುವಾರ ಬೀದರ್ ಜಿಲ್ಲಾ ಪ್ರವಾಸದಲ್ಲಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಪ್ರತಿಭಟನಾನಿರತ ಕಾರ್ಯಕರ್ತೆಯರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆಶಾ ಕಾರ್ಯಕರ್ತೆಯರು ನಮ್ಮ ಆರೋಗ್ಯ ಇಲಾಖೆಯ ಕುಟುಂಬಸ್ಥರು. ಇಲಾಖೆಯ ಎಲ್ಲಾ ಕೆಲಸಗಳನ್ನು ಅವರು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಅವರ ಬೇಡಿಕೆಗಳ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಮುಂಬರುವ ವಿಧಾನಮಂಡಲದ ಅಧಿವೇಶನ ಮುಗಿಯುವುದರೊಳಗೆ ಕಾರ್ಯಕರ್ತೆಯರಿಗೆ ಖಂಡಿತವಾಗಿಯೂ ಸಿಹಿಸುದ್ದಿ ನೀಡಲಿದ್ದೇವೆ. ಜೊತೆಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು. ಆದ್ದರಿಂದ ಸರ್ಕಾರದ ಮೇಲೆ ನಂಬಿಕೆಯಿಟ್ಟು ತಕ್ಷಣವೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಬೇಕು” ಎಂದು ಮನವಿ ಮಾಡಿದ್ದಾರೆ.

 

 


Share this with Friends

Related Post