ಬೆಂಗಳೂರು: ‘ಶಕ್ತಿ ಯೋಜನೆ’ ಜಾರಿಯಾದ ಬಳಿಕ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿ ಹೆಚ್ಚಳವಾಗಿದ್ದು, ಈ ನೂಕುನುಗ್ಗಲಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಸಾರಿಗೆ ನಿಗಮಗಳ ಎಲ್ಲಾ ಬಸ್ಗಳಲ್ಲಿ ಇನ್ಮುಂದೆ ನಿಗದಿತ ಆಸನ ಸಾಮರ್ಥ್ಯಕ್ಕೆ (ಸೀಟಿಂಗ್ ಕೆಪಾಸಿಟಿ) ತಕ್ಕಂತೆ ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ ನಂತರ ಬಸ್ಗಳಲ್ಲಿ ನಿಗದಿತ ಮಿತಿಗಿಂತ ದುಪ್ಪಟ್ಟು ಜನರು ಸಂಚರಿಸುತ್ತಿರುವ ಕುರಿತು ಸಾರ್ವಜನಿಕ ವಲಯದಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಕಿಕ್ಕಿರಿದು ತುಂಬುವ ಬಸ್ಗಳಿಂದಾಗಿ ವಿದ್ಯಾರ್ಥಿಗಳು ಫುಟ್ಬೋರ್ಡ್ ಹಾಗೂ ಬಾಗಿಲ ಬಳಿ ನಿಂತು ಅಪಾಯಕಾರಿಯಾಗಿ ಪ್ರಯಾಣಿಸುವಂತಾಗಿತ್ತು. ಅಲ್ಲದೆ, ಹಿರಿಯ ನಾಗರಿಕರು, ರೋಗಿಗಳು ಹಾಗೂ ದೈನಂದಿನ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುವುದರ ಜೊತೆಗೆ ಬಸ್ಗಳಲ್ಲಿ ಕಳ್ಳತನದ ಪ್ರಕರಣಗಳೂ ಹೆಚ್ಚಾಗಿದ್ದವು. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಈ ನೂತನ ನಿಯಮವನ್ನು ಜಾರಿಗೆ ತಂದಿದೆ.
ರಾಜ್ಯಾದ್ಯಂತ ಸಂಚರಿಸುವ ಸಾರಿಗೆ ನಿಗಮಗಳ ಬಸ್ಗಳಲ್ಲಿ ಸೀಟುಗಳ ಸಂಖ್ಯೆಗೆ ಅನುಗುಣವಾಗಿ ಮಾತ್ರ ಪ್ರಯಾಣಿಕರಿಗೆ ಪ್ರವೇಶ ನೀಡಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಲಾಗಿದ್ದು, ನಿಯಮ ಉಲ್ಲಂಘಿಸಿ ಹೆಚ್ಚುವರಿ ಪ್ರಯಾಣಿಕರನ್ನು ಹತ್ತಿಸಿಕೊಂಡರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ.
ಹೊಸ ನಿಯಮದ ಕುರಿತು ಪ್ರಯಾಣಿಕರಿಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ ಬಸ್ ನಿಲ್ದಾಣಗಳಲ್ಲಿ ಚಾಲಕರು ಹಾಗೂ ನಿರ್ವಾಹಕರೊಂದಿಗೆ ವಾಗ್ವಾದ ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ನಿಯಮದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವಂತೆಯೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

