Mon. Dec 23rd, 2024

ಹುಕ್ಕಾ ಹಾವಳಿಗೆ ಕಡಿವಾಣ ಹಾಕಿದ ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು,ಫೆ.8: ತಂಬಾಕು ರಹಿತ ಎಂದು ಹೇಳಿಕೊಂಡು‌ ನಡೆಯುತ್ತಿದ್ದ ಅನಾರೋಗ್ಯಕರ ಹುಕ್ಕಾ ಹಾವಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಡಿವಾಣ ಹಾಕಿದ್ದಾರೆ.

ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ತಂಬಾಕು ರಹಿತ ಹುಕ್ಕಾ ಬಳಕೆ ಮತ್ತು ಮಾರಾಟ, ಸೇವನೆಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಕಳವಳ ವ್ಯಕ್ತಪಡಿಸುತ್ತಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹುಕ್ಕಾ ನಿಷೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಮತ್ತು ತಂಬಾಕು ಸಂಬಂಧಿತ ರೋಗಗಳ ಹೆಚ್ಚಳವನ್ನು ತಡೆಯುವ ನಿಟ್ಟಿನಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆಯನ್ನ ನಿಷೇಧಿಸಲಾಗಿದೆ

ವಿಶ್ವ ಆರೋಗ್ಯ, ಸಂಸ್ಥೆ ನಡೆಸಿರುವ ಗ್ಲೋಬಲ್ ಅಡಲ್ಸ್ ಟೊಬ್ಯಾಕೋ ಸರ್ವೇ 2016-17, ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ಶೇ. 22.8 ವಯಸ್ಕರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ ಶೇ.8.8 ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ.

ಯುವ ಜನತೆಯು ಇತ್ತೀಚಿನ ವರ್ಷಗಳಲ್ಲಿ ತಂಬಾಕು ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಗ್ಲೋಬಲ್ ಯೂತ್ ಟೊಬ್ಯಾಕೋ ಸರ್ವೇ ಯಲ್ಲಿ ದೃಢಪಟ್ಟಿದೆ.

ಹುಕ್ಕಾ ಸೇವನೆಯ ಅಪಾಯಗಳು ಸಿಗರೇಟ್ ಸೇವನೆಗಿಂತ ಹಲವು ಪಟ್ಟು ಹೆಚ್ಚಾಗಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ,ಹಾಗಾಗಿ ಆರೋಗ್ಯ ಇಲಾಖೆ ಎಚ್ಚೆತ್ತು ಈ ಕ್ರಮ ಕೈಗೊಂಡಿದೆ.

ಹುಕ್ಕಾ ಮೇಲಿನ ನಿಷೇಧದಿಂದಾಗಿ ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ಬಾಗಿಲುಗಳು ಬಂದ್ ಆಗಲಿವೆ.


Share this with Friends

Related Post