ನಂಜನಗೂಡು,ಏ.21: ನಾವು ಆಧುನಿಕ ಕಾಲಕ್ಕೆ ಕಾಲಿಟ್ಟರೂ ಗ್ರಾಮೀಣ ಭಾಗದಲ್ಲಿ ಇನ್ನೂ ಬಹಿಷ್ಕಾರದಂತಹ ಹೇಯ ಪರಿಸ್ಥಿತಿ ಇರುವುದು ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತಹ ವಿಷಯ.
ನಂಜನಗೂಡು ತಾಲೂಕು ತರಗನಹಳ್ಳಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದ್ದು
ಬಹಿಷ್ಕಾರಕ್ಕೆ ಒಳಗಾದ ಕುಟುಂಬದಲ್ಲಿ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಪೊಷಕರು ಪರದಾಡಿದ ಹೇಯ ಘಟನೆ ನಡೆದಿದೆ.
ಯುವಕನ ಅಂತ್ಯಸಂಸ್ಕಾರಕ್ಕೆ ಗ್ರಾಮದಲ್ಲಿ ಅವಕಾಶ ನೀಡದ ಕಾರಣ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಮೃತದೇಹ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರ ಮನ ಒಲಿಸಿ ವಿಕಲಚೇತನ ಯುವಕನ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಸಿಕೊಟ್ಟರು
ತರಗನಹಳ್ಳಿಯ ನಿವಾಸಿ ಕುಳ್ಳನಾಯಕ ಎಂಬವರ ಕುಟುಂಬದ ಮೇಲೆ ನಾಲ್ಕು ವರ್ಷಗಳ ಹಿಂದೆ ಮುಖಂಡರು ಬಹಿಷ್ಕಾರ ಹೇರಿದ್ದರಂತೆ.
ಬಹಿಷ್ಕಾರವನ್ನ ತೆರುವುಗೊಳಿಸಲು ಕುಳ್ಳನಾಯಕ ಸರ್ಕಾರಿ ಕಚೇರಿಗೆ ಸಾಕಷ್ಟು ಅಲೆದಾಡಿದ್ದರೂ ತಾಲೂಕು ಆಡಳಿತ ಸೂಕ್ತವಾಗಿ ಸ್ಪಂದಿಸಿರಲಿಲ್ಲ.
ನಿನ್ನೆ ಕುಳ್ಳನಾಯಕನ ಮಗ ಮಾದೇಶ ಮೃತಪಟ್ಟಿದ್ದಾನೆ. ಅಂತ್ಯಸಂಸ್ಕಾರ ಮಾಡಲು ಗ್ರಾಮದಲ್ಲಿ ಅವಕಾಶ ನೀಡಿಲ್ಲ ಹಾಗಾಗಿ ನೊಂದ ಕುಳ್ಳನಾಯಕ ಮಗನ ಮೃತದೇಹವನ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಕೊಂಡೊಯ್ಯಲು ಮುಂದಾಗಿದ್ದರು.
ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಕ್ಷಣ ತಹಸೀಲ್ದಾರ್ ಗೆ ಸೂಚನೆ ನೀಡಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.
ನಂತರ ತಹಸೀಲ್ದಾರ್ ಗ್ರಾಮದ ಮುಖಂಡರ ಮನ ಒಲಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿ ಯುವಕನ ದೇಹಕ್ಕೆ ಕಡೆಗೂ ಮುಕ್ತಿ ದೊರೆಯುವಂತೆ ಮಾಡಿದ್ದಾರೆ.