ಬೆಂಗಳೂರು,ಮೇ.10: ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಿಳೆಯ ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದ್ದು ಸಂಜೆ ದೇವರಾಜೇಗೌಡರನ್ನು
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವರಾಜೇಗೌಡ ವಿರುದ್ಧ ಏಪ್ರಿಲ್ 1ರಂದು ಹೊಳೆನರಸೀಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಹಾಸನ ಜಿಲ್ಲೆಯ 36 ವರ್ಷದ ಮಹಿಳೆಯೊಬ್ಬರು ತಮ್ಮ ಆಸ್ತಿ ಮಾರಾಟಕ್ಕೆ ಸಹಾಯ ಮಾಡುವ ನೆಪದಲ್ಲಿ ದೇವರಾಜೇಗೌಡ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ವೀಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ. ವೀಡಿಯೋ ಕಾಲ್ ಮಾಡಿ ಪ್ರಚೋದನೆಗೆ ಯತ್ನಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕಳೆದ ವರ್ಷ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡರು, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ತಂದೆ, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ದೇವರಾಜೇಗೌಡ, ಲೈಂಗಿಕ ಕಿರುಕುಳದ ವೀಡಿಯೊಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಜ್ಯ ಕಾಂಗ್ರೆಸ್ ನಾಯಕರನ್ನು ದೂರಿದ್ದರು.
ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ದೇವರಾಜೇಗೌಡ ಭಾರೀ ಸದ್ದು ಮಾಡಿದ್ದರು.