ಹಾಸನ,ಮೇ.17: ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದೆನ್ನಲಾದ ಪೆನ್ಡ್ರೈವ್ ಪ್ರಕರಣದ ಬಗ್ಗೆ ವಕೀಲ ದೇವರಾಜೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಪೆನ್ಡ್ರೈವ್ ರೆಡಿ ಮಾಡಿದ್ದೇ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೆ.ಶಿವಕುಮಾರ್ ಅವರು ನನ್ನನ್ನು ಕರೆಸಿ ಮಾತನಾಡಿದ್ದರು, ನೀನು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡು, ಪೆನ್ಡ್ರೈವ್ ಕುಮಾರಸ್ವಾಮಿ ಹಂಚಿದ್ರು ಅಂತಾ ಹೇಳು, ನಿನಗೆ ಸಮಸ್ಯೆ ಆಗಲ್ಲ,ರಕ್ಷಣೆ ಮಾಡ್ತಿನಿ ಅಂತಾ ಭರವಸೆ ನೀಡಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
ದೊಡ್ಡಮಟ್ಟದ ಹಣದ ಆಫರ್ ಕೊಟ್ಟರು. ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್, ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದ್ದಾರೆ,ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ಇನ್ನೊಬ್ಬ ಸಚಿವರು. ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನಾನು ಒಪ್ಪಲಿಲ್ಲಾ, ಮೋದಿ, ಬಿಜೆಪಿ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಪ್ಲಾನ್ ಮಾಡಿದ್ದರು. ನನಗೆ ಸುಮಾರು ನೂರು ಕೋಟಿ ಆಫರ್ ಕೊಟ್ಟಿದ್ದರು, ಐದು ಕೋಟಿ ರೂಪಾಯಿ ಅಡ್ವಾನ್ಸ್ ದುಡ್ಡನ್ನ ಬೌರಿಂಗ್ ಕ್ಲಬ್ನ ರೂಮ್ ನಂಬರ್ 110 ಕ್ಕೆ ಕಳಿಸಿದ್ದರು ಎಂದು ತಿಳಿಸಿದ್ದಾರೆ.
ಚನ್ನರಾಯಪಟ್ಟಣ ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಐದು ಕೋಟಿ ಹಣ ಕೊಟ್ಟು ಡಿಕೆಶಿ ಕಳಿಸಿದ್ದರು. ಡಿ.ಕೆ.ಶಿವಕುಮಾರ್ ಮುಖ್ಯ ಉದ್ದೇಶ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವವನ್ನು ರಾಜ್ಯದಲ್ಲಿ ಹಾಳು ಮಾಡಬೇಕು ಎನ್ನುವುದು, ಇದು ಸತ್ಯ ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ.