Mon. Dec 23rd, 2024

ಪ್ರಜ್ವಲ್ ರಾಜತಾಂತ್ರಿಕ ಪಾಸ್​​ಪೋರ್ಟ್​ ರದ್ದು;ಕೇಂದ್ರಕ್ಕೆ ಸಿಎಂ ಪತ್ರ:ಪರಮೇಶ್ವರ್

Share this with Friends

ಬೆಂಗಳೂರು,ಮೇ.21: ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್​​ಪೋರ್ಟ್​ ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ‌ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಖುದ್ದು ಸಿದ್ದರಾಮಯ್ಯ ಅವರೇ ಪಾಸ್​​ಪೋರ್ಟ್​ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪ್ರಜ್ವಲ್ ರೇವಣ್ಣ ಬಂಧನಕ್ಕೆ ಈಗಾಗಲೆ ವಾರಂಟ್ ಜಾರಿ ಆಗಿದೆ. ಅದರ ಆಧಾರದ ಮೇಲೆ ರಾಜತಾಂತ್ರಿಕ ಪಾಸ್​ಪೋರ್ಟ್ ರದ್ದು ಕೋರಿ ಪತ್ರ ಬರೆಯಲಾಗಿದೆ. ಪಾಸ್​ಪೋರ್ಟ್​ ರದ್ದು ಮಾಡಿದರೆ ಪ್ರಜ್ವಲ್ ಭಾರತಕ್ಕೆ ಬರಲೇಬೇಕಾಗುತ್ತದೆ ಎಂದು ತಿಳಿಸಿದರು.

ಎಸ್ಐಟಿ ಮುಂದೆ ಶರಣಾಗುವಂತೆ ಪ್ರಜ್ವಲ್​ ರೇವಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇದು ಅವರ ಕುಟುಂಬದ ಆಂತರಿಕ ವಿಚಾರ ಎಂದು ಹೇಳಿದರು.

ಇನ್ನು ಫೋನ್​ ಟ್ಯಾಪ್​ ಆಗುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ವತಿಯಿಂದ ‌ಯಾರ ಫೋನೂ ಟ್ಯಾಪ್ ಮಾಡಿಲ್ಲ,ಒಂದು ವೇಳೆ ಫೋನ್​ ಟ್ಯಾಪ್​ ಆಗಿದ್ದರೆ ದಾಖಲೆ ಕೊಡಲಿ,ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.

ವಕೀಲ ದೇವರಾಜೇಗೌಡ ಆಡಿಯೋ ಬಗ್ಗೆ ಎಸ್​ಐಟಿ ನೋಡಿಕೊಳ್ಳುತ್ತದೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಹೇಳಿದರು.

ಎಚ್​.ಡಿ ದೇವೇಗೌಡರ ಕುಟುಂಬ ಮುಗಿಸಲು ಷಡ್ಯಂತ್ರ್ಯ ನಡೆಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಎಚ್ ​ಡಿ ಕುಮಾರಸ್ವಾಮಿ ಅವರು ಯಾವ ಉದ್ದೇಶದಿಂದ‌ ಹೇಳಿದ್ದಾರೆ ಗೊತ್ತಿಲ್ಲ,ನಮ್ಮ ಸರ್ಕಾರಕ್ಕೆ ಬಹಳ‌ ಕೆಲಸ ಇದೆ, ಆಡಳಿತ ಮಾಡಬೇಕು,ಇಡೀ ದೇಶ ನಮ್ಮ ಕಾಂಗ್ರೆಸ್ ಸರ್ಕಾರದ ಕಡೆ ನೋಡುತ್ತಿದೆ ಎಂದು ಟಾಂಗ್ ನೀಡಿದರು.

ಬೆಂಗಳೂರಿನ ಜಿ.ಆರ್.ಫಾರ್ಮ್​ಹೌಸ್​ನಲ್ಲಿ ನಡೆದಿದ್ದ ರೇವ್ ಪಾರ್ಟಿ ವೇಳೆ ಸಿಸಿಬಿ ಪೊಲೀಸರ ದಾಳಿ ನಡೆಸಿದಾಗ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಪತ್ತೆ ಆಗಿದೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.

ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಮಾಹಿತಿ ಪಡೆದಿದ್ದಾರೆ. ಡ್ರಗ್ಸ್ ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ.

ಗಾಂಜಾ ಎಲ್ಲಿಂದ ಬರುತ್ತಿದರ ಎಂಬ ಮಾಹಿತಿ ಮೇಲೆ ಆರೋಪಿಗಳನ್ನು ಹಿಡಿಯಲಾಗುವುದು, ಪೆಡ್ಲರ್ಸ್ ಗಳನ್ನು ಹಿಡಿಯವುದು ಬಹಳ ಮುಖ್ಯ, ರೇವ್ ಪಾರ್ಟಿ ಹತ್ತಿಕ್ಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.


Share this with Friends

Related Post