Wed. Dec 25th, 2024

ಸಿದ್ದರಾಮಯ್ಯಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು

Share this with Friends

ಬೆಂಗಳೂರು,ಮೇ.24: ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ‌ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು‌ ನೀಡಿದ್ದಾರೆ.

ಮೊಮ್ಮಗನನ್ನ ವಿದೇಶಕ್ಕೆ ಕಳಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಬಗ್ಗೆ ಲಘುವಾಗಿ ಹೇಳಿದ್ದ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿಮ್ಮ ಆತ್ಮಸಾಕ್ಷಿ ಎನ್ನುವುದು ಅಸ್ತಿತ್ವದಲ್ಲಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ನಾನು ವಕೀಲನಾಗಿದ್ದೆ, ಹಿಂದೆ ನಾನೂ ವಕೀಲಿಕೆ ಮಾಡುತ್ತಿದ್ದೆ ಎಂದು ಪದೇಪದೆ ಹೇಳಬೇಡಿ. ನಿಮ್ಮ ವಕೀಲಿ ಜ್ಞಾನದ ಮೇಲೆ ಅಗೌರವ ಬರುವಂತೆ ಮಾತನಾಡಬೇಡಿ ಎಂದು ಹೇಳಿದ್ದಾರೆ.

ಅತ್ಯಾಚಾರದ ವೀಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ ಎಂಬ ಆಣಿಮುತ್ತು ಉದುರಿಸಿದ್ದೀರಿ,ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋಗಳನ್ನು ಹಂಚಿ ವಿಕೃತಾನಂದ ಅನುಭವಿಸುವುದು ಮನುಷ್ಯತ್ವವೆ, ಮನುಷ್ಯರು ಹೇಳುವ ಮಾತೇ ಎಂದು ‌ಕಾರವಾಗಿ ಪ್ರಶ್ನಿಸಿದ್ದಾರೆ.

ನಿಮ್ಮ ಪಕ್ಕದಲ್ಲಿ ಪೆನ್ ಡ್ರೈವ್ ಹಂಚಿಕೆದಾರ ಕೂತಿದ್ದಾರೆ. ಆ ಸಿಡಿ ಶಿವು ಚುನಾವಣಾ ಸ್ವಾರ್ಥಕ್ಕಾಗಿ ಹೆಣ್ಮಕ್ಕಳ ಮಾನವನ್ನು ಪೆನ್ ಡ್ರೈವ್ ಗಳಿಗೆ ತುಂಬಿಸಿ ಹಾದಿಬೀದಿಯಲ್ಲಿ ಮಾರಿಕೊಂಡಿದ್ದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಉಪ ಮುಖ್ಯಮಂತ್ರಿ ಮಹಾಶಯ ಪೆನ್ ಡ್ರೈವ್ ಹಂಚಿಕೆಯಲ್ಲಿ ಶಾಮೀಲಾಗಿಲ್ಲವೇ, ದೇವರಾಜೆಗೌಡ, ಬ್ರೋಕರ್ ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ನಡುವಿನ ಮೊಬೈಲ್ ಸಂಭಾಷಣೆ ನಿಮ್ಮ ಸರಕಾರದ ಮಾನವನ್ನು ಹಾಸನದಲ್ಲಿ ಪೆನ್ ಡ್ರೈವ್ ರೂಪದಲ್ಲಿ ವೋಟಿಗೆ ಹರಾಜಾಗಲಿಲ್ಲವೇ, ಚಾಲಕ ಕಾರ್ತಿಕ್ ಗೌಡ ಆ ನೊಂದ ಮಹಿಳೆಯರ ಅಶ್ಲೀಲ ವಿಡಿಯೋಗಳು ತುಂಬಿದ್ದ ಮೊದಲ ಪೆನ್ ಡ್ರೈವನ್ನು ನಿಮಗೆ ತಂದು ಕೊಡಲಿಲ್ಲವೇ ಎಂದು ನಿಮ್ಮ ಉಪ ಮುಖ್ಯಮಂತ್ರಿಯನ್ನು ಒಮ್ಮೆಯಾದರೂ ಕೇಳಿದ್ದೀರಾ ಮುಖ್ಯಮಂತ್ರಿಗಳೇ ಎಂದು ಹೆಚ್.ಡಿ.ಕೆ ಪ್ರಶ್ನೆಗಳ ಸುರಿಮಳೆ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರನ್ನು ನಾನೆಂದೂ ಸಮರ್ಥನೆ ಮಾಡಿಲ್ಲ, ಮಾಡುವುದೂ ಇಲ್ಲ. ಪ್ರಕರಣ ಹೊರಬಂದ ಮೊದಲ ದಿನವೇ ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದೇನೆ. ನನ್ನ ಹೇಳಿಕೆ ನಿಮಗೆ ಗೊತ್ತಾಗಲಿಲ್ಲವೇ ನಿಮಗೆ ಪತ್ರಿಕೆ ಓದುವ ಅಭ್ಯಾಸ ಇಲ್ಲದಿದ್ದರೆ ನಾನೇನು ಮಾಡಲಿ ಎಂದಿದ್ದಾರೆ ಅವರು.

ಪ್ರಜ್ವಲ್ ದೇವೇಗೌಡರಿಗೆ ಹೇಳಿಯೇ ವಿದೇಶಕ್ಕೆ ಹೋಗಿದ್ದಾನೆ ಎಂದು ಹೇಳಿದ್ದೀರಿ. ನಿಮಗೆ ಹೇಗೆ ಗೊತ್ತು, ನಿಮ್ಮ ಪಕ್ಕದಲ್ಲೇ ಕೂರುವ ಸಿಡಿ ಶಿವು ಮಾಡುತ್ತಿರುವ ಮಾನಗೇಡಿ ಕೃತ್ಯಗಳು ಗೊತ್ತಾಗುವುದಿಲ್ಲ, ಆದರೆ, ದೇವೆಗೌಡರ ಮನೆಯಲ್ಲಿ ನಡೆಯೋದೆಲ್ಲ ನಿಮಗೆ ಗೊತ್ತಾಗುತ್ತದೆಯೇ!? ಅದು ಹೇಗೆ? ನನ್ನ ಮತ್ತು ದೇವೆಗೌಡರ ಮನೆಗೆ ಕಳ್ಳಕಿವಿ ಇಟ್ಟಿದ್ದೀರಿ ಎನ್ನುವ ನನ್ನ ಆರೋಪ ಸತ್ಯ ಎಂದಂತಾಯಿತು ಎಂದು ಕುಟುಕಿದ್ದಾರೆ.

ನಿಮ್ಮ ಸುಪುತ್ರ, ದಿವಂಗತ ರಾಕೇಶ್ ಅವರನ್ನು ಟುಮಾರೋ ಲ್ಯಾಂಡ್ ಎನ್ನುವ ಅಮಲಿನ ಪಾರ್ಟಿಗೆ ನೀವೇ ಕಳಿಸಿದ್ದೀರಿ, ಅಲ್ಲಿ ಅವರ ಸಾವಿಗೆ ನೀವೇ ಕಾರಣರಾದಿರಿ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ನಿಮ್ಮ ಮನಸ್ಸಿಗೆ ಹೇಗಾಗಬೇಡ.

ದೇವೇಗೌಡರ ಬಗ್ಗೆ ನೀವು ಕೇಳಿದ್ದು ಕೂಡ ಹಾಗೆಯೇ ಅಲ್ಲವೇ ಮುಖ್ಯಮಂತ್ರಿಗಳೇ, ಶೋಕದ ಮನೆಯಲ್ಲಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ, ಅರ್ಥ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ


Share this with Friends

Related Post