Mon. Dec 23rd, 2024

ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ ಸರ್ಕಾರ: ಆರ್. ಅಶೋಕ್ ಟೀಕೆ

Share this with Friends

ಬೆಂಗಳೂರು, ಫೆ.12: ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಯೋಜನೆಗಳನ್ನು ತಮ್ಮ ಯೋಜನೆಯಂತೆ ಬಿಂಬಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದು ಗ್ಯಾರಂಟಿ ತಂದಿದ್ದೇವೆ ಎಂದು ಹೇಳಿದ್ದರೂ ಯುವನಿಧಿ ಇನ್ನೂ ನಿರುದ್ಯೋಗಿಗಳ ಕೈ ಸೇರಿಲ್ಲ, ಬರ ಪರಿಹಾರ ಕೊಟ್ಟಿದ್ದೇವೆ ಎನ್ನುತ್ತಾರೆ,ಆದರೆ ಪರಿಹಾರವನ್ನು ಕಂತಾಗಿ ಕೊಡುತ್ತಾರೆ.

ನಮ್ಮ ಸರ್ಕಾರ ಪರಿಹಾರವನ್ನು ಒಂದೇ ಸಲಕ್ಕೆ ರೈತರ ಖಾತೆಗೆ ಹಾಕಿತ್ತು. ಈ ಸರ್ಕಾರ ಕಂತು ಕಂತಾಗಿ ನೀಡುವುದು ತಪ್ಪು. ನಾವು 25 ಸಾವಿರ ರೂ. ಪರಿಹಾರ ಕೇಳಿದ್ದರೆ, ಆ ವಿಷಯವನ್ನು ಪ್ರಸ್ತಾಪಿಸಿಲ್ಲ. ಕೇವಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗಿದೆ ಎಂದು ಆರೋಪಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಗಿತ್ತು. ಮೆಟ್ರೊ ರೈಲು ಯೋಜನೆ ಕೇಂದ್ರ ಸರ್ಕಾರದಿಂದ ಆಗಿದೆ. ಜಲಜೀವನ್ ಮಿಷನ್ ಕೂಡ ಕೇಂದ್ರದ ಕೊಡುಗೆ. ನಾಚಿಕೆ ಇಲ್ಲದೆ ಅವೆಲ್ಲ ತಮ್ಮದೇ ಎಂದು ಹೇಳಿಕೊಂಡಿದ್ದಾರೆ ಎಂದು ಅಶೋಕ್ ತರಾಟೆಗೆ ತೆಗೆದುಕೊಂಡರು.

ಹಿಂದೂ ದ್ವೇಷ ಹೆಚ್ಚಿದೆ, ಭಯೋತ್ಪಾದನಾ ಚಟುವಟಿಕೆ ಅತಿಯಾಗಿದೆ,ಆದರೂ ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಸರ್ಕಾರ ಕಾನೂನು ಸುವ್ಯವಸ್ಥೆಯನ್ನೇ ಕಾಪಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಉಳಿವು ಎಂದು ಹೋರಾಟಗಾರರನ್ನು ಜೈಲಿಗೆ ಹಾಕಿದ್ದಾರೆ. ಎಸ್ ಸಿ ಎಸ್ಪಿ, ಟಿಎಸ್ಪಿ ಹಣವನ್ನು ದಲಿತರಿಗೆ ಬಳಸದೆ ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಒಂದೇ ಒಂದು ಕಾಮಗಾರಿ ನಡೆದಿಲ್ಲ ಎಂದು ಶಾಸಕರು ಹೇಳಿದ್ದಾರೆ. 40 ಪರ್ಸೆಂಟ್ ಕಮಿಶನ್ ಸರ್ಕಾರ ಎಂದು ಗುತ್ತಿಗೆದಾರರೇ ಹೇಳಿದ್ದಾರೆ ಎಂದು ಹೇಳಿದರು.

ಬರಗಾಲವಿದ್ದರೂ ಕಳೆದ ವರ್ಷಕ್ಕಿಂತ ಆತ್ಮಹತ್ಯೆ ಕಡಿಮೆಯಾಗಿದೆ ಎನ್ನುತ್ತಾರ ಆತ್ಮಹತ್ಯೆ ಹೆಚ್ಚಿದ್ದರೂ ಮುಚ್ಚಿಟ್ಟು ಸುಳ್ಳು ಹೇಳಿದ್ದಾರೆ. 2 ಸಾವಿರ ರೂ. ಪರಿಹಾರ ಎಂದು ಕಾಟಾಚಾರಕ್ಕೆ ಘೋಷಣೆ ಮಾಡಿದರು,ಫ್ರೂಟ್ಸ್ ತಂತ್ರಾಂಶದಲ್ಲಿ ಇನ್ನೂ ನೋಂದಣಿ ಸಮಸ್ಯೆ ಇದೆ. ಇಷ್ಟಿದ್ದರೂ ರೈತರಿಗೆ ಪರಿಹಾರ ನೀಡಿದ್ದೇವೆ ಎಂದು ನಾಚಿಕೆ ಇಲ್ಲದೆ ಹೇಳಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತುವ ಕೆಲಸವನ್ನು ಸರ್ಕಾರ ಮಾಡಿದೆ. ಮುಸ್ಲಿಮರಿಗೆ 1 ಸಾವಿರ ಕೋಟಿ ರೂ. ನೀಡುವ ಸರ್ಕಾರ, ಪರಿಹಾರ ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತದೆ ಎಂದು ಟೀಕಿಸಿದರು.

ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ ಎನ್ನುತ್ತಾರೆ. ಆದರೆ ಗ್ಯಾರಂಟಿಗಾಗಿ ಖಜಾನೆ ಖಾಲಿ ಮಾಡಿಕೊಂಡ ಸರ್ಕಾರ, ಶಾಸಕರಿಗೆ ಅನುದಾನ ನೀಡದೆ ಸತಾಯಿಸುತ್ತಿದೆ,ಈಗ ನಮ್ಮ ಸರ್ಕಾರ ಮಾದರಿ ಎಂದು ರಾಜ್ಯಪಾಲರ ಭಾಷಣದಲ್ಲಿ ಸುಳ್ಳು‌ ಹೇಳಿಸಿದೆ ಎಂದು ಅಶೋಕ್ ತೀವ್ರ ‌ವಾಗ್ದಾಳಿ ನಡೆಸಿದರು.


Share this with Friends

Related Post