ಹಾಸನ,ಜೂ.2: ಲೋಕಸಭಾ ಚುನಾವಣೆ ಮತ ಎಣಿಕೆ ಪಾರದರ್ಶಕವಾಗಿ ನಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಹರದನಹಳ್ಳಿಯ ನಿವಾಸದಲ್ಲಿ ಜೆಡಿಎಸ್ ಶಾಸಕರು ಹಾಗೂ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರದರ್ಶಕವಾಗಿ ಮತ ಎಣಿಕೆ ನಡೆಸಬೇಕು, ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಆಯೋಗ ನಿರ್ದೇಶನ ನೀಡಬೇಕು ಎಂದು ಹೇಳಿದರು.
ಮತ ಎಣಿಕೆ ಕೇಂದ್ರಗಳಿಗೆ ಮಾಧ್ಯಮದವರಿಗೆ ಅವಕಾಶ ಕಲ್ಪಿಸಬೇಕು, ಹಾಸನ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಜೂನ್ 4 ರಂದು ಬೆಳಿಗ್ಗೆ 6 ಗಂಟೆಗೆ ನಮ್ಮ ಪಕ್ಷದ ಚುನಾವಣಾ ಏಜೆಂಟ್, ಮುಖಂಡರು ಹೋಗುತ್ತಾರೆ. ಪಕ್ಷದ ಎಲ್ಲಾ ಮುಖಂಡರು ಮತ ಎಣಿಕೆ ಸಂದರ್ಭದಲ್ಲಿ ಹಾಜರಿರುತ್ತಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಮತದಾನೋತ್ತರ ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಲು ರೇವಣ್ಣ ನಿರಾಕರಿಸಿದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮೆ ದೇಶದ ಪ್ರಧಾನಿಯಾಗುವುದು ನಿಶ್ಚಿತ, ಈ ದೇಶ ಉಳಿಯಬೇಕಾದರೆ ಮೋದಿಯವರು ಪ್ರಧಾನಮಂತ್ರಿ ಆಗಲೇಬೇಕು, ಲಕ್ಷ್ಮೀನರಸಿಂಹ ಸ್ವಾಮಿ ಕೃಪೆ ಇರುವವರೆಗೂ ನಮಗೇನೂ ತೊಂದರೆಯಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟ ಮುಖ್ಯಮಂತ್ರಿ ಎಂದರೆ ಅದು ಎಚ್.ಡಿ.ಕುಮಾರಸ್ವಾಮಿ ಎಂದು ರೇವಣ್ಣ ಇದೇ ವೇಳೆ ತಿಳಿಸಿದರು.
1,600 ಪ್ರೌಢಶಾಲೆ, 600 ಪದವಿ ಪೂರ್ವ ಕಾಲೇಜು, 250 ಪದವಿ ಕಾಲೇಜುಗಳನ್ನು ಅವರ ಅವಧಿಯಲ್ಲಿ ತೆರೆಯಲಾಯಿತು. ಏಳೆಂಟು ಸಾವಿರ ಕೋಟಿ ರೂ. ಶಾಲಾ-ಕಾಲೇಜುಗಳ ಕಟ್ಟಡಗಳಿಗೆ ನೀಡಿದ್ದರು. ಅಲ್ಲದೆ, 4,800 ಶಿಕ್ಷಕರು, 1,600 ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.