Mon. Dec 23rd, 2024

ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರದಿಂದ ನೆರವು:ಸಿಎಂ

Share this with Friends

ಬೆಂಗಳೂರು, ಜೂ.30: ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರ ಮೊದಲಿನಿಂದಲೂ ಸಹಾಯ ಮಾಡುತ್ತಾ ಬಂದಿದೆ,ಮುಂದೆಯೂ ನೆರವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡದ ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಚಲನಚಿತ್ರ ನಿರ್ಮಾಪಕರಿಗೆ ಇಲ್ಲಿಯವರೆಗೆ ಸ್ವಂತ ಕಟ್ಟಡ ಇರಲಿಲ್ಲ,ಈಗ ಸ್ವಂತ ಕಟ್ಟಡ ನಿರ್ಮಾಣವಾಗಿದ್ದು , ಅದರ ಉದ್ಘಾಟನೆಯನ್ನು ನೆರವೇರಿಸಿದ್ದೇನೆ ಇದು ಖುಷಿ ತಂದಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ರಾತ್ರಿ 8 ಗಂಟೆಗೆ ಸಮಾಯ ಕೊಟ್ಟಿದ್ದರು ಈ ಕಾರ್ಯಕ್ರಮ ತಪ್ಪಿಸಬಾರದೆಂದು ನಿನ್ನೆಯೇ ದೆಹಲಿಯಿಂದ ಆಗಮಿಸಿದ್ದೇನೆ ಎಂದು ಸಿದ್ದು ಹೇಳಿದರು.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದವರು ಬಹಳ ಕಷ್ಟದ ದಿನಗಳಿದ್ದರೂ ಕೂಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ನಿರ್ಮಾಪಕರಿಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಆರ್ಥಿಕ ಸಹಾಯವನ್ನು ಸಂಘ ಕೇಳಿಯೇ ಇಲ್ಲ,ಆದರೂ ಸರ್ಕಾರದಿಂದ ಆರ್ಥಿಕ ಸಹಾಯ ಮಾಡಲಾಗುತ್ತದೆ ಎಂದು ಸಿಎಂ ಹೇಳಿದರು.

ಕನ್ನಡದಲ್ಲಿ ಸರ್ಕಾರದ ವತಿಯಿಂದ ಓಟಿಟಿ ವೇದಿಕೆ ಸೃಜಿಸಲಾಗುವುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಕನ್ನಡ ಚಿತ್ರಗಳಿಗೆ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲಿದೆ ಎಂದು ಆಶ್ವಾಸನೆ ನೀಡಿದರು.

ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣವನ್ನು ಪಿ.ಪಿ.ಪಿ ಮಾದರಿಯಲ್ಲಿ ಕೈಗೊಳ್ಳಲಿದ್ದು, ನೂರು ಎಕರೆಗೂ ಹೆಚ್ಚು ಜಮೀನು ಒದಗಿಸಲಾಗಿದೆ ಚಿತ್ರನಗರಿ ಡಾ: ರಾಜ್ ಕುಮಾರ್ ಅವರ ಕನಸಾಗಿತ್ತು ಅದನ್ನು ನನಸಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಇದೇ ವೇಳೆ ಸಿದ್ದರಾಮಯ್ಯ ಭರವಸೆ ನೀಡಿದರು.

ನವದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯದ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಗಿದೆ ಎಂದು ಸಿಎಂ ಇದೇ‌ ವೇಳೆ ತಿಳಿಸಿದರು.


Share this with Friends

Related Post