Mon. Dec 23rd, 2024

ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ:ಸಿದ್ದು ತಿರುಗೇಟು

Share this with Friends

ಬೆಂಗಳೂರು, ಫೆ. 21: ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

ವಿಧಾನ‌ ಪರಿಷತ್ ನಲ್ಲಿಂದು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ವೇಳೆ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸಿಎಂ ವಿವರಿಸಲು ಮುಂದಾದಾಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಮೋದಿಯವರು, ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಹೇಳಿದ್ದ ಮಾತನ್ನು ಸಿದ್ದು ಉಲ್ಲೇಖಿಸಿದರು.

ಮೋದಿ ಅವರು ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷುಕರಲ್ಲ,ಗುಜರಾತ್ ರಾಜ್ಯದಿಂದ ಸಂಗ್ರಹ ಆಗುವ ತೆರಿಗೆಯಲ್ಲಿ ಶೇ50 ರಷ್ಟು ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಗುಜರಾತ್ ರಾಜ್ಯದ ತೆರಿಗೆಯನ್ನು ನಾವು ಕೇಂದ್ರಕ್ಕೆ ಕೊಡುವುದಿಲ್ಲ ಎಂಬ ಮಾತನ್ನೂ ಮೋದಿ ಅವರು ಆಡಿದ್ದರು. ಆದರೆ ಈಗ ಅದೇ ಮೋದಿ ಅವರು ಪ್ರಧಾನಿ ಆಗಿರುವಾಗ ಕರ್ನಾಟಕ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಶೇ 12-13 ರಷ್ಟು ಮಾತ್ರ.

ಮೋದಿ ಅವರು ತಾವು ಸಿಎಂ ಆಗಿದ್ದಾಗ ಒಂದು ಮಾತು ಈಗ ಪ್ರಧಾನಿ ಆದ ನಂತರ ಈ ರೀತಿ ಮಾತನಾಡಿದ್ದಾರೆ. ಇದನ್ನು ಪ್ರಸ್ತಾಪಿಸಿದರೆ ನಿಮಗೇಕೆ ಸಿಟ್ಟು ಎಂದು ಸಿದ್ದು ಬಿಜೆಪಿ ಸದಸ್ಯರನ್ನು ಕೆಣಕಿದರು.

ನಾವು ಕೊಡುವ ಪ್ರತಿ 100 ರೂಪಾಯಿಗೆ ಕೇವಲ 12 ರೂ ವಾಪಾಸ್ ಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ ಇಷ್ಟು ಕಡಿಮೆ ಪಾಲು ನಮಗೆ ಕೊಟ್ಟರೆ ರಾಜ್ಯದ ಶೂದ್ರರು, ದಲಿತರು, ಆದಿವಾಸಿಗಳು, ದುಡಿಯುವವರು, ಶ್ರಮಿಕರು, ಯುವಕರು ಮಹಿಳೆಯರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕಾರವಾಗಿ ಪ್ರಶ್ನಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಹಣದ ಪಾಲು ಅನ್ಯಾಯವಾದುದು.2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24,44,213 ಕೋಟಿ ಇತ್ತು. ಅಂದು ರಾಜ್ಯಕ್ಕೆ 51000 ಕೋಟಿ ಮಾತ್ರ ಬಂತು. 2020-21 ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 30,42,243 ಕೋಟಿ ಇದ್ದರೆ ನಮಗೆ ಬಂದಿದ್ದು 31734ಕೋಟಿ ರೂ., 2021-22 ರಲ್ಲಿ 34,83,236 ಕೋಟಿ ಗಾತ್ರದ ಬಜೆಟ್ ಗೆ , ರಾಜ್ಯಕ್ಕೆ 48589 ಕೋಟಿ ಬಂತು. 2022-23ರಲ್ಲಿ ಕೇಂದ್ರದ ಬಜೆಟ್ 4181232 ಕೋಟಿ , ರಾಜ್ಯಕ್ಕೆ 53510 ಕೋಟಿ ಮಾತ್ರ ಬಂತು. 2023-24ರಲ್ಲಿ 45,03007 ಕೋಟಿ ಕೇಂದ್ರದ ಬಜೆಟ್ ಗಾತ್ರ. ರಾಜ್ಯಕ್ಕೆ ಬಂದಿದ್ದು 50257 ಕೋಟಿ ಮಾತ್ರ. 2024-25ರಲ್ಲಿ ರಾಜ್ಯಕ್ಕೆ 59785 ಕೋಟಿ ಬರುತ್ತದೆ ಎಂದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಅಂಕಿ ಅಂಶಗಳನ್ನು ಬಿಚ್ಚಿಟ್ಟರು.

ಅಂದಿನ ಕೇಂದ್ರ ಸರ್ಕಾರಕ್ಕೆ ಗುಜರಾತಿನಿಂದ ತೆರಿಗೆ ತೆಗೆದುಕೊಳ್ಳಬೇಡಿ, ಅದನ್ನು ನಾವೇ ಬಳಸಿಕೊಳ್ಳುತ್ತೇವೆ ಎಂದು ಮೋದಿ ಅವರು ಹೇಳಿದ್ದರು. ಇದು ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರೋಧವಲ್ಲವೇ ಎಂದು ಅಂದಿನ ಮೋದಿಯವರ ಮಾತನ್ನೇ ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಬಿಜೆಪಿಯವರ ಬಾಯಿ ಮುಚ್ಚಿಸಿದರು.


Share this with Friends

Related Post