ಬೆಂಗಳೂರು: ಇ ಖಾತಾ ವ್ಯವಸ್ಥೆಯನ್ನು ಸರ್ಕಾರ ಸರಳಗೊಳಿಸಬೇಕೆಂದು
ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯಾವುದೇ ಲಂಚವಿಲ್ಲದೆ ಜನರು ಸುಲಭವಾಗಿ ಸೇವೆ ಪಡೆಯುವಂತಾಗಬೇಕು ಎಂದು ಹೇಳಿದರು.
ಸರ್ಕಾರ ಇ ಖಾತಾ ಮಾಡುವ ಮುನ್ನ ಮಾಹಿತಿ ಪಡೆಯಬೇಕಿತ್ತು, ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದರು.
ಈಗಾಗಲೇ ಅಪ್‌ಲೋಡ್ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್‌ಆರ್‌ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್ ಮಾಡಬೇಕಿದೆ ಈ ಯಾವ ಕೆಲಸಗಳೂ ಆಗಿಲ್ಲ ಎಂದು ಅಶೋಕ್ ದೂರಿದರು.
ಜನರಿಗೆ ಮನೆ ಸಾಲ ಸಿಗಲು ಇ ಖಾತಾ ಬೇಕಾಗುತ್ತದೆ. ದಿನಕ್ಕೆ 5 ರಿಂದ 6 ರಷ್ಟು ಇ ಖಾತಾ ಮಾಡಲಾಗುತ್ತಿದೆ. ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸರಳಗೊಳಿಸಬೇಕು, ಯಾವುದೇ ಲಂಚವಿಲ್ಲದೆ ಇ ಖಾತಾ ವರ್ಗಾವಣೆಯಾಗಬೇಕು ಎಂದು ಪ್ರತಿಪಕ್ಷ ನಾಯಕ ಒತ್ತಾಯಿಸಿದರು.