ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮ ಸಂಬಂಧ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ
ವಿರುದ್ಧ ದೂರು ನೀಡಿದ್ದಾರೆ.
50:50 ನಿವೇಶನ ಪಡೆಯುವಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಪ್ರಭಾವ ಬೀರಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.
ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದ ಭೂಮಿಗೆ ಅಕ್ರಮವಾಗಿ 50:50 ಪರಿಹಾರ ಕೊಡಿಸಲಾಗಿದೆ. ಜಿ.ಟಿ ದೇವೇಗೌಡರ ಪ್ರಭಾವ ಬಳಸಿ ಚೌಡಯ್ಯ ಎಂಬವರ ಹೆಸರಿಗೆ 44,736 ಚದರ ಅಡಿ ಜಾಗದ 6 ನಿವೇಶನ ಕೊಡಿಸಿದ್ದಾರೆ. ಅದರಲ್ಲಿ ಕಿಕ್‌ಬ್ಯಾಕ್ ರೂಪದಲ್ಲಿ 2 ನಿವೇಶನವನ್ನು ತಮ್ಮ ಕುಟುಂಬಕ್ಕೆ ಬರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ
ವಿಜಯನಗರ ಬಡಾವಣೆ 4ನೇ ಹಂತದಲ್ಲಿ 2 ನಿವೇಶನ ಪಡೆದು ಅದನ್ನ ತಮ್ಮ ಮಗಳು ಅನ್ನಪೂರ್ಣ ಹಾಗೂ ಅಳಿಯ ವಿಶ್ವೇಶ್ವರಯ್ಯ ಹೆಸರಿಗೆ ಕ್ರಯ ಮಾಡಿಸಿದ್ದಾರೆ.
ಇದರಲ್ಲಿ ಜಿ.ಟಿ ದೇವೇಗೌಡ ಅವರ ಪ್ರಭಾವ ಇದೆ, ಆರ್‌ಟಿಸಿಯಲ್ಲಿ ಸರ್ಕಾರಿ ಭೂಮಿ ಎಂದಿದೆ, ಈ ವ್ಯಾಜ್ಯ ಕೋರ್ಟ್‌ನಲ್ಲಿ ಬಾಕಿ ಇದೆ. ಆದರೂ ಜಿಟಿಡಿ ತಮ್ಮ ಕುಟುಂಬಕ್ಕೆ 50:50 ನಿವೇಶನ ಬರೆಸಿಕೊಂಡಿದ್ದಾರೆ ಎಂದು ದೂರಿದ್ದಾರೆ.