Fri. Mar 6th, 2026

ಆನೆ,ಹುಲಿ ಅರಣ್ಯದಿಂದ ಹೊರಬರಲು ವೈಜ್ಞಾನಿಕ ಕಾರಣ ಪತ್ತೆ ಮಾಡಿ ವರದಿ ನೀಡಿ: ಸಿಎಂ ಸೂಚನೆ

Share this with Friends

ಮೈಸೂರು: ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ಕಾಡಿಮಿಂದ ನಾಡಿನತ್ತ ಬರುವ ಪ್ರಕರಣ ಹೆಚ್ಚಾಗುತ್ತಿದ್ದು,ಹುಲಿ-ಆನೆಗಳು ಅರಣ್ಯದಿಂದ ಹೊರಗೆ ಬರಲು ಏನು ಕಾರಣ ? ಎನ್ನುವುದನ್ನು ಸಂಶೋಧನಾತ್ಮಕವಾಗಿ ಪತ್ತೆ ಹಚ್ಚಿ ವೈಜ್ಞಾನಿಕ‌ ಕಾರಣ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು,ಮಾನವ-ಹುಲಿ ಸಂಘರ್ಷದ ಬಗ್ಗೆ ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ ಮಾಡಿದ್ದೇವೆ.ಹುಲಿ-ಆನೆಗಳು ಅರಣ್ಯದಿಂದ ಹೊರಗೆ ಬರಲು ಏನು ಕಾರಣ ? ವೈಜ್ಞಾನಿಕ‌ ಕಾರಣ ನೀಡಿ: ವೈಜ್ಞಾನಿಕ ಮಾರ್ಗದಲ್ಲಿ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯುವ ತುರ್ತು ಇದೆ ಎಂದು ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಎಂದರು‌

ನೀರು,ಆಹಾರ ಅರಸಿ ವನ್ಯಜೀವಿಗಳು ನಾಡಿನತ್ತ ಬರುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ಕಾಡಿನಲ್ಲಿರುವ ನೀರಿನ ಗುಂಡಿಗಳನ್ನು ತುಂಬಿಸಬೇಕು.‌ ಲಾಂಟೆನಾ ತೆಗೆಸಬೇಕು. ಅರಣ್ಯದಲ್ಲಿ ಮೇವು ಬೆಳೆಸಬೇಕು. ಆನೆ, ಹುಲಿಗಳು ಹೊರಗೆ ಬರುವ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಅರಣ್ಯ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಪ್ರತ್ಯೇಕವಾದ ಸಭೆ ಕರೆಯುತ್ತಿದ್ದೇವೆ. ಸಮಗ್ರ ಮಾಹಿತಿ ಮತ್ತು ಪರಿಹಾರದ ಬಗ್ಗೆ ಅಧ್ಯಯನ‌ ನಡೆಸಿ ಪೂರ್ತಿ ಸಿದ್ಧತೆಯೊಂದಿಗೆ ಸಭೆಗೆ ಬರಬೇಕು ಎಂದು ಸೂಚಿಸಿದ್ದೇನೆ.ಈಗಾಗಲೇ ಹೆಲ್ಪ್ ಲೈನ್ ತೆರೆಯಲಾಗಿದೆ. ಕಮಾಂಡ್ ಸೆಂಟರ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಕಾರಿಗಳು ಸಭೆಗೆ ಮಾಹಿತಿ ನೀಡಿದ್ದಾರೆ ಎಂದರು.

ಅರಣ್ಯ ಹಕ್ಕು ಕಾಯ್ದೆಗೆ ಬಂದಿರುವ 7000 ಅರ್ಜಿಗಳಲ್ಲಿ 5900 ಅರ್ಜಿಗಳು ತಿರಸ್ಕರಿಸಲ್ಪಟ್ಟಿರುವುದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದ ಸಿಎಂ, ಇವು 2019-20 ರಿಂದ ತಿರಸ್ಕರಿಲ್ಪಟ್ಟ ಅರ್ಜಿಗಳು. ತಿರಸ್ಕರಿಸುವಾಗ ಸ್ಪಷ್ಟವಾದ, ನೈಜವಾದ ಕಾರಣ ನೀಡದಿದ್ದರೆ ಅಂತಹ ಅರ್ಜಿಗಳನ್ನು ಮರುಪರಿಶೀಲನೆಗೆ ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ನನಗೆ ತಿಳಿಸಿದ್ದಾರೆ ಎಂದರು‌

ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿರಲು ಸೂಚನೆ ನೀಡಿದ್ದೇನೆ. ಹಾಡಿಗಳು, ಅರಣ್ಯವಾಸಿಗಳ ವಿಚಾರದಲ್ಲಿ ಅಂತಃಕರಣದಿಂದ ವರ್ತಿಸಿ ಎನ್ನುವ ಸೂಚನೆ ನೀಡಿದ್ದೇನೆ.ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ, ಕರ್ತವ್ಯಲೋಪದಿಂದ ಮಾವ ಜೀವ ಹಾನಿ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದೇನೆ.

ಹೆಚ್‌.ಡಿ.ಕೋಟೆ ವ್ಯಾಪ್ತಿಯ ಹಾಡಿಗಳಲ್ಲಿನ 16 ಹಾಡಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ ವಿದ್ಯುತ್‌ ಮಾತ್ರ ಬರುತ್ತಿಲ್ಲ. ಹಾಡಿಗಳ ಕುಡಿಯುವ ನೀರು, ಹಕ್ಕು ಪತ್ರ, ಅಂಗನವಾಡಿ, ಮನೆ, ಆಹಾರ ವಿತರಣೆ, ಹಾಡಿ ನಿವಾಸಿಗಳ ಅರಣ್ಯ ಉತ್ಪನ್ನ ಸಂಗ್ರಹ, ಮಾರಾಟದ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಮತ್ತು ಅಸಹಾಕಾರದ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ಆಗಿ ಈ ಬಗ್ಗೆ ಸೂಕ್ತವಾಗಿ ವರ್ತಿಸಲು, ಅರಣ್ಯವಾಸಿಗಳ ಜೊತೆ ಅಂತಃಕರಣದಿಂದ ವರ್ತಿಸುವಂತೆ ಸೂಚಿಸಿದ್ದೇನೆ. ಅರಣ್ಯಾಧಿಕಾರಿಗಳ ಇಂಥಾ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರ ರೀತಿ ವರ್ತಿಸಬೇಡಿ. ಸ್ವಲ್ಪ ಉದಾರವಾಗಿ ವರ್ತಿಸಿ. ಮಾನವೀಯವಾಗಿ ನಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.


Share this with Friends

Related Post