Thu. Mar 5th, 2026

ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬ ಸಂಘದ ಕಟ್ಟಡ ಉಳಿಯುತ್ತಿರಲಿಲ್ಲ, ಕಾಗಿನೆಲೆ ಪೀಠ ಆಗುತ್ತಿರಲಿಲ್ಲ: ಸಿಎಂ

Share this with Friends

ಬೆಂಗಳೂರು:ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬ ಸಂಘದ ಕಟ್ಟಡವೂ ಉಳಿಯುತ್ತಿರಲಿಲ್ಲ, ಕಾಗಿನೆಲೆ ಪೀಠವೂ ಆಗುತ್ತಿರಲಿಲ್ಲ, ರಿಯಲ್ ಎಸ್ಟೇಟ್ ರೌಡಿಗಳಿಂದ ಬೈರಪ್ಪನ ಗುಡಿ ಮತ್ತು ಸಮಾಜದ ಭೂಮಿ, ಕಟ್ಟಡಗಳನ್ನು ಉಳಿಸಲು ಸಾಧ್ಯ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತಿಹಾಸದ ಘಟನೆಗಳನ್ನು ಒಂದೊಂದಾಗಿ ವಿವರಿಸಿದರು.

ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದಿಂದ 600 ಕುರುಬ ಸಮುದಾಯ ಭವನಗಳನ್ನು ಮಾಡಲು ಮುಂದಾಗಿದ್ದು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಸೇರಿ ರಾಜ್ಯದ ಹತ್ತು ಹಲವು ಕಡೆಗಳಲ್ಲಿ ಸಂಘಕ್ಕೆ ಜಾಗ-ಕಟ್ಟಡ ಉಳಿಸಿಕೊಟ್ಟಿದ್ದೇನೆ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮಾಡಿದ್ದು ನಾನೇ, ಸಂಗೊಳ್ಳಿ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾನೇ. ಈಗ ನನಗೂ ಮುಕುಡಪ್ಪನಿಗೂ ಆಗುವುದಿಲ್ಲ. ಆದರೆ ಕುರುಬ ಸಮಾಜಕ್ಕೆ ಆಸ್ತಿ ಉಳಿಸಿ, ಬೆಳೆಸುವ ಕಾರ್ಯದಲ್ಲಿ ಮುಕುಡಪ್ಪ ಸೇರಿ ಶಿವಣ್ಣ, ಮಾಸ್ತಿ, ಸಿದ್ದಲಿಂಗಯ್ಯ, ನಾಗಣ್ಣ ರೀತಿಯ ಹಲವರು ಜೊತೆಗೆ ನಿಂತು ಸಹಕಾರ ಮಾಡಿದರು ಎಂದರು.

ನಾನು 1983 ರಲ್ಲಿ ಶಾಸಕನಾಗಿ 1984 ರಲ್ಲಿ ಮಂತ್ರಿ ಆದೆ. ನಾನು ಸಾರಿಗೆ ಮಂತ್ರಿ ಆಗಿದ್ದಾಗ 1988 ರಲ್ಲೇ ಕನಕದಾಸರ 500ನೇ ಜಯಂತ್ಸೋವವನ್ನು ಆಚರಣೆ ಮಾಡಿಸಿದೆ. ಇದೇ ಸಂದರ್ಭದಲ್ಲಿ  ಸಮಾಜಕ್ಕೊಂದು ಗುರುಪೀಠ ಬೇಕು ಎಂದು ತೀರ್ಮಾನಿಸಿದೆ. ಆಗ ಸಂಘದ ಕಟ್ಟಡದ ಮೇಲೆ 3 ಕೋಟಿ ರೂಪಾಯಿ ಸಾಲ ಇತ್ತು. ಆ ಸಾಲದ ಸುಳಿಯಿಂದ ಸಂಘವನ್ನು ಬಿಡಿಸಿದ್ದು ನಾವು. ಇದು ಇತಿಹಾಸ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ಇತಿಹಾಸ ಗೊತ್ತಿದ್ದವರು ಬಹಿರಂಗವಾಗಿ ಮಾತಾಡಬೇಕಿತ್ತು. ಅವರ್ಯಾರೂ ಮಾತಾಡದ ಕಾರಣಕ್ಕೆ, ನಾನು ಮಾತಾಡಬಾರದು ಅಂದುಕೊಂಡಿದ್ದವನು ಎಲ್ಲವನ್ನೂ ಮಾತಾಡಬೇಕಾಗಿ ಬಂತು. ಯಾರು ಮಾತಾಡಲಿ, ಬಿಡಲಿ ಇದು ಸತ್ಯ. ಇದು ಇತಿಹಾಸ. ಒಟ್ಟಿನಲ್ಲಿ ಸಮಾಜದ ಸಂಘಟನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಹಿಂದೆ ರೌಡಿ ಕೊತ್ವಾಲ್ ರಾಮಚಂದ್ರನ ಜೊತೆ ಇದ್ದ ಪುಟ್ಟಸ್ವಾಮಿಯಿಂದ ಜೀವ ಬೆದರಿಕೆ ಇತ್ತು. ನಾನು ಹೆದರಲಿಲ್ಲ. ಕುರುಬರ ಸಂಘದ ವಿಚಾರದಲ್ಲಿ ಭಾಗಿ ಆಗದಂತೆ ನನಗೆ ಬೆದರಿಕೆ ಇತ್ತು. ಆದರೂ ನಾನು ಹೆದರದೆ ಗ್ರಾಮೀಣ ಭಾಗದ ಸಂಘದ ನಿರ್ದೇಶಕರ ಬೆಂಬಲದಲ್ಲಿ ದಾವಣಗೆರೆಯ ಮಲ್ಲಪ್ಪ ಅವರನ್ನು ರೌಡಿ ಪುಟ್ಟಸ್ವಾಮಿ ವಿರುದ್ಧ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಲ್ಲಿಸಿದೆ. ಪುಟ್ಟಸ್ವಾಮಿ ನ್ಯಾಯಾಲಯಕ್ಕೆ ಹೋದರೂ ತೀರ್ಪು ನಮ್ಮ ಪರವಾಗಿ ಬಂತು. ಹೀಗೆ ಸಂಘವನ್ನು ನಾನು ಉಳಿಸಿದೆ.

ಬಳಿಕ ನನ್ನ ಹಳೇ ಕಾರಲ್ಲಿ ಇಡೀ ರಾಜ್ಯ ಸುತ್ತಿ ಸಮಾಜವನ್ನು ಸಂಘಟಿಸಿದೆ. ತಾರಾಕಾನಂದರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದ್ದು ನಾನೇ.  ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪ ಅವರನ್ನು ಮತ್ತು ಕೇಂದ್ರ ಸಚಿವರಾಗಿದ್ದ ಶರದ್ ಪವಾರ್ ಅವರನ್ನು ಕರೆಸಿ ಪೀಠಕ್ಕೆ ಚಾಲನೆ ನೀಡಲಾಯಿತು. ಹೀಗೆ ಕುರುಬರ ಸಂಘ ಮತ್ತು ಕುರುಬ ಸಮಾಜದ ಪೀಠವನ್ನು ಉಳಿಸಿದ್ದು ನಾನು. ರಾಜ್ಯ ಸುತ್ತಿ ಸಮಾಜದ ಸಂಘಟಿಸಿದ್ದು ನಾನು, ಮುಕುಡಪ್ಪ, ಮಾಸ್ತಿ ಮತ್ತು  ಇತರರು. ಆಮೇಲೆ ವಿಶ್ವನಾಥ್ ಅವರನ್ನು ಪೀಠದ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ವಿಶ್ವನಾಥ್ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಆದ್ದರಿಂದ ಇಡೀ ಸಮಾಜ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಸಮಾಜಕ್ಕೆ ಏನು ಮಾಡಿದ್ದೇನೆ ಎನ್ನುವ ಚರಿತ್ರೆಯನ್ನು ಮನದಟ್ಟು ಮಾಡಿಕೊಳ್ಳಬೇಕು. ಗುರುಪೀಠ ನಾನು ಮಾಡಿದ್ದು ಎಂದು ನಿರಂಜನಾನಂದಪುರಿ ಸ್ವಾಮೀಜಿಗೆ ಹೆದರಿಸುವವರು ಇತಿಹಾಸ ತಿರುಚುತ್ತಿದ್ದಾರೆ ಎಂದರು.


Share this with Friends

Related Post