ಬೆಂಗಳೂರು:ಮೆಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದ್ದು,ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದರಿಂದ “ಈ ಯೋಜನೆಗೆ ಅನುಮತಿ ನೀಡದೇ ಬೇರೆ ಆಯ್ಕೆ ಕೇಂದ್ರ ಜಲ ಆಯೋಗಕ್ಕೆ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿಕೊಡಲೇಬೇಕು”ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,“ಮೇಕೆದಾಟು ಯೋಜನೆ ಡಿಪಿಆರ್ ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.ಆ ಮೂಲಕ ನ್ಯಾಯ ಪೀಠದಿಂದ ನ್ಯಾಯ ಸಿಕ್ಕಂತಾಗಿದೆ. ಮೇಕೆದಾಟು, ‘ನಮ್ಮ ನೀರು, ನಮ್ಮ ಹಕ್ಕು’ ಯೋಜನೆ. ನಾವು ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡುತ್ತಿಲ್ಲ. ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭವಾಗಲಿದೆ. ರಾಜ್ಯದ ಜನರ ಪ್ರಾರ್ಥನೆ, ಜನರ ಕಷ್ಟಕ್ಕೆ ನ್ಯಾಯಾಲಯ ಸ್ಪಂದಿಸಿದೆ” ಎಂದು ತಿಳಿಸಿದರು.
“ನ್ಯಾಯಾಲಯಗಳ ತೀರ್ಮಾನದಂತೆ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆಯಲಿದೆ. ಹೀಗಾಗಿ ನಾವು ಈ ಯೋಜನೆ ಮುಂದುವರಿಸಿಕೊಂಡು ಹೋಗುತ್ತೇವೆ. ಈ ಯೋಜನೆಯನ್ನು ನಮ್ಮ ನೆಲದಲ್ಲಿ, ನಮ್ಮ ಹಣದಲ್ಲಿ ಮಾಡಲಾಗುತ್ತಿದೆ. ನೀರಿನ ಕೊರತೆ ಉಂಟಾದಾಗ ತಮಿಳುನಾಡಿಗೆ ನೀರು ಹರಿಸಲು ಈ ಸಮತೋಲಿತ ಅಣೆಕಟ್ಟೆ ನೆರವಾಗಲಿದೆ. ಇದು ಬೆಂಗಳೂರಿಗರ ಗೆಲುವು. ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಂದ ಬರುವ ಜನರಿಗೂ ನೀರು ಒದಗಿಸಲಾಗುವುದು. ಈಗಲಾದರೂ ಯೋಜನೆಗೆ ಸಹಕಾರ ನೀಡಿ ಎಂದು ತಮಿಳುನಾಡಿಗೆ ಮನವಿ ಮಾಡುತ್ತೇನೆ. ನಾವೆಲ್ಲರೂ ಮಾನವೀಯತೆ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡೋಣ” ಎಂದು ಕರೆ ನೀಡಿದರು.
ಸಹಕಾರ ನೀಡದೇ ಸಿಡಬ್ಲ್ಯೂಸಿ ಮುಂದೆ ಬೇರೆ ಆಯ್ಕೆಯೇ ಇಲ್ಲ:
ನ್ಯಾಯಾಲಯವು ಇಂತಹ ವಿಚಾರದಲ್ಲಿ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ)ಗೆ ಮಾರ್ಗದರ್ಶನ ನೀಡಲಿದ್ದು, ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ ಹಾಗಾಗಿ “ಈ ಯೋಜನೆಗೆ ಅನುಮತಿ ನೀಡದೇ ಬೇರೆ ಆಯ್ಕೆ ಅವರ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿಕೊಡಲೇಬೇಕು” ಎಂದು ತಿಳಿಸಿದರು.

