ನವದೆಹಲಿ: ಕೈಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕದಾದ್ಯಂತ ಸೂಕ್ತ ಕೈಗಾರಿಕಾ ಕಾರಿಡಾರ್ ಯೋಜನೆಯ ಚೌಕಟ್ಟಿನಡಿಯಲ್ಲಿ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸುವ ಕುರಿತಂತೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಶ್ ಗೋಯಲ್ ಜತೆ ಮಾತುಕತೆ ನಡೆಸಿದ್ದು, ಅವರು ರಾಜ್ಯದ ಕೈಗಾರಿಕಾಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನವದೆಹಲಿಯಲ್ಲಿ ವಾಣಿಜ್ಯ ಸಚಿವಾಲಯದ ಕಚೇರಿಗೆ ತೆರಳಿ ಸಚಿವ ಗೋಯಲ್ ಅವರನ್ನು ಭೇಟಿಯಾದ ಕುಮಾರಸ್ವಾಮಿ; 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಮನವಿಯನ್ನು ಸಲ್ಲಿಸಿ ರಾಜ್ಯದ ಕೈಗಾರಿಕಾಭಿವೃದ್ಧಿ ಬಗ್ಗೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಸಿದರು.
ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ಸುವಿಶಾಲವಾದ, ಬಹುವ್ಯಾಪ್ತಿಯುಳ್ಳ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP) ಅನುಷ್ಠಾನ ಮಾಡಬೇಕೆಂದು ಕೋರಿ ಗೋಯಲ್ ಅವರನ್ನು ಕೋರಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಯನ್ನು ಬಲಪಡಿಸಿ ಉತ್ತೇಜಿಸಲು, ಸಾಗಾಣಿಕೆಯ ಮೂಲಸೌಕರ್ಯವನ್ನು ಅಧಿಕವಾಗಿ ಅಭಿವೃದ್ಧಿಪಡಿಸಲು ಹಾಗೂ ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಈ ಯೋಜನೆಯು ಬಹುದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂಬ ಅಂಶವನ್ನು ಸಚಿವ ಗೋಯಲ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ನನ್ನ ಪ್ರಸ್ತಾವನೆಗೆ ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ರಾಜ್ಯದ ಕೈಗಾರಿಕಾಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಸಾಗಾಣಿಕೆ ಸುಲಭವಾಗಿ ಕೈಗಾರಿಕಾಭಿವೃದ್ಧಿ ವೇಗಗತಿಯಲ್ಲಿ ಸಾಗುತ್ತದೆ. ಉದ್ದೇಶಿತ ಜಿಲ್ಲೆಗಳಲ್ಲಿ ಯೋಜನೆ ಬಂದರೆ ಇಡೀ ರಾಜ್ಯಕ್ಕೆ ಸಮಗ್ರವಾಗಿ ಅನುಕೂಲ ಆಗುತ್ತದೆ. ಮುಖ್ಯವಾಗಿ ಈ ಪ್ರದೇಶಗಳು ಸಾಮೂಹಿಕವಾಗಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಅಭಿವೃದ್ಧಿ ಕಾಣುವುದಲ್ಲದೆ, ಸಮತೋಲಿತ ಪ್ರಾದೇಶಿಕ ಬೆಳವಣಿಗೆಗೆ ಕಾಣಿಕೆ ನೀಡುತ್ತವೆ ಕುಮಾರಸ್ವಾಮಿ ಚರ್ಚೆಯ ವೇಳೆ ಒತ್ತಿ ಹೇಳಿದರು.
ಸಮತೋಲಿತ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ:
ಪ್ರಸ್ತಾವಿತ ಕೈಗಾರಿಕಾ ಪಾರ್ಕುಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ, ಪ್ರಾದೇಶಿಕ ಪೂರೈಕೆ ಸರಪಳಿಯ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸುವ ಹಾಗೂ ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಲ್ಲಿ ಸಾಗಣೆ ಮತ್ತು ಉತ್ಪಾದನೆಯಿಂದ ಮೊದಲುಗೊಂಡು ರಾಯಚೂರಿನಲ್ಲಿ ಕೃಷಿ ಸಂಸ್ಕರಣೆ, ಮೈಸೂರು ಮತ್ತು ಕೋಲಾರದಲ್ಲಿ ಮೌಲ್ಯವರ್ಧಿತ ವಲಯಗಳ ವಿಸ್ತರಣೆವರೆಗೆ ವಿಶೇಷ ಕೈಗಾರಿಕಾ ಸಮೂಹಗಳನ್ನು ಉತ್ತೇಜಿಸುತ್ತವೆ ಎಂದು ಸಚಿವ ಕುಮಾರಸ್ವಾಮಿ ವಿವರಿಸಿದರು.

