Fri. Mar 6th, 2026

ಜಾತಿಗಣತಿ ಹೆಸರಿನ ದತ್ತಾಂಶ ಹಂಚಿಕೊಳ್ಳುವ ಮುನ್ನ ಯೋಚಿಸಿ: ಆಯೋಗದಿಂದ ಬಂತು ಎಚ್ಚರಿಕೆ ಸಂದೇಶ

Share this with Friends

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳು ಭದ್ರವಾಗಿದ್ದು ಸುಳ್ಳು ಮಾಹಿತಿಯನ್ನು ವಾಟ್ಸ್ ಆಪ್,ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಲ್ಲಿ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಹಾಗಾಗಿ ಯಾರೂ ಇಂತಹ ಮಾಹಿತಿ ಶೇರ್ ಮಾಡಬೇಡಿ ಎಂದು  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮನವಿ ಮಾಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗಳು, ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ:28665/2025, 28668/2025 ಮತ್ತು 28675/2025ಕ್ಕೆ ಸಂಬಂಧಿಸಿದಂತೆ, ಉಚ್ಚ ನ್ಯಾಯಾಲಯದ ಆದೇಶ ದಿನಾಂಕ: 25-09-2025 ರಲ್ಲಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸೂಚಿಸಿದ್ದು, ಅದರಂತೆ ಕ್ರಮಕೈಗೊಳ್ಳುವ ಕುರಿತು ಆಯೋಗದಿಂದ ಉಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಸಮೀಕ್ಷೆಯ ಮಾಹಿತಿ ಹಾಗೂ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಬದ್ಧತೆಯನ್ನು ಆಯೋಗ ಹೊಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ದತ್ತಾಂಶ ಸೋರಿಕೆ ಆರೋಪ ತಳ್ಳಿಹಾಕಿದ್ದಾರೆ.

2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ವಿವಿಧ ಜಾತಿಗಳ ಜನಸಂಖ್ಯೆಯ ತಪ್ಪು ಮಾಹಿತಿಯನ್ನು WhatsApp ನಲ್ಲಿ share ಮಾಡಿರುವ ಮೊಬೈಲ್ ಸಂಖ್ಯೆ: 8618891657 ಮತ್ತು 9972508500 ರ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಸಮೀಕ್ಷಾ ದತ್ತಾಂಶಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಸೃಜಿಸಿ, ಸಾಮಾಜಿಕ ಜಾಲತಾಣಗಳಾದ WhatsApp, Facebook, Twitter, Instagram ಇತ್ಯಾದಿಗಳಲ್ಲಿ ಹಂಚಿಕೊಂಡಲ್ಲಿ ಇದಕ್ಕೆ ಕಾರಣರಾಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಆದ್ದರಿಂದ ಈ ರೀತಿ ಯಾವುದೇ ಸುಳ್ಳು/ತಪ್ಪು ಮಾಹಿತಿಯನ್ನು ಸೃಜಿಸಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸದಂತೆ ಹಾಗೂ ಬಂದಿರುವ ಮಾಹಿತಿಯನ್ನು ಫಾರ್ವರ್ಡ್ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.


Share this with Friends

Related Post