Fri. Mar 6th, 2026

ನನ್ನ ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ

Share this with Friends

ಚಾಮರಾಜನಗರ:ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆಸಿ,ನನ್ನ ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿದೆ.ಜನರು ಎಲ್ಲಿವರೆಗೆ ಅಪೇಕ್ಷಿಸುವರೋ, ಅಲ್ಲಿಯವೆಗೆ ನಾನೇ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಚಾಮರಾಜನಗರ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,2028 ರಲ್ಲಿಯೂ ಸಿದ್ದರಾಮಯ್ಯನವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಾಗುವುದೇ ಎನ್ನುವ ಚರ್ಚೆ ನಡೆಯುತ್ತಿದೆ ಈ ಬಗ್ಗೆ ಭವಿಷ್ಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜನರು ಎಲ್ಲಿವರೆಗೆ ಅಪೇಕ್ಷಿಸುವರೋ, ಅಲ್ಲಿಯವೆಗೆ ನಾನೇ ಬಜೆಟ್ ಮಂಡಿಸುತ್ತೇನೆ ಎಂದರು.

ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಕೆ ಬಗ್ಗೆ ನಡೆಯುತ್ತಿರುವ ಚರ್ಚೆ ಅನಾವಶ್ಯಕ. ಎರಡೂವರೆ ವರ್ಷದ ನಂತರ ಸಂಪುಟ ಪುನರ್ರಚನೆ ಮಾಡಬಹುದು ಎಂದು ತಿಳಿಸಿದ ನಂತರವಷ್ಟೇ , ಮುಖ್ಯಮಂತ್ರಿ ಬದಲಾವಣೆಯ ವಿಷಯ ಮುನ್ನಲೆಗೆ ಬಂದಿರುವುದು. ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕಿದೆ. ಒಟ್ಟು 34 ಸಚಿವರ ಸ್ಥಾನವಿದ್ದು, ಅದರಲ್ಲಿ ಎರಡು ಸ್ಥಾನಗಳು ಖಾಲಿಯಿದೆ. ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಈ ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದರು.

2028 ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ:

ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ಬಗ್ಗೆ ಮಾಡಿದ ಹೇಳಿಕೆ ಕುರಿತು ಪತ್ರಕರ್ತರ ಪ್ರಶ್ನೆಗೆ  ಉತ್ತರಿಸುತ್ತಾ, ಇಂತಹ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಐದು ವರ್ಷ ಆಡಳಿತ ನಡೆಸಲು ಜನಾದೇಶ ಇದೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ನವೆಂಬರ್ ಕ್ರಾಂತಿ ಎಂಬ ವಿಷಯವನ್ನು ಮಾಧ್ಯಮದವರೇ ಸೃಷ್ಟಿಸಿದರು. ಜನರು ಆಸೆಯಂತೆ ಐದು ವರ್ಷ ಸರ್ಕಾರ ನಡೆಸಿ ನಂತರವೂ ಪುನ: ಕಾಂಗ್ರೆಸ್ ಪಕ್ಷವೇ ಆಯ್ಕೆಯಾಗಿ ಬರಲಿದೆ ಎಂದು ತಿಳಿಸಿದರು.

ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ನಂಬುವುದಿಲ್ಲವಾದ್ದರಿಂದ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ಕಂಡು, ಎಲ್ಲ  ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ. ಆ ಮೌಢ್ಯವನ್ನು ಹೋಗಲಾಡಿಸಲು ಇಲ್ಲಿಗೆ ಭೇಟಿ ನೀಡಿದ್ದು, ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ  ಎಂದು ತಿಳಿಸಿದರು.

ಬೆಂಗಳೂರು ಬ್ಯಾಂಕ್ ದರೋಡೆ :ಅಪರಾಧಿಗಳ ಬಂಧನಕ್ಕೆ ಕ್ರಮ

ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ದರೋಡೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಕಳುವಿನ ಬಗ್ಗೆ ಸುಳಿವು ಸಿಕ್ಕಿದ್ದು, ಘಟನೆಗೆ ಬಳಸಿದ ಕಾರು ಪೊಲೀಸರಿಗೆ ದೊರಕಿದೆ. ಬ್ಯಾಂಕ್ ದರೋಡೆಯ ಅಪರಾಧಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.

ಪ್ರಧಾನಿ ಮೋದಿ ಭೇಟಿ:

ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ಬಗ್ಗೆ ವಿವರಗಳನ್ನು ಕೇಳಲಾಗಿ, ರಾಜ್ಯದಲ್ಲಿ ಅಧಿಕ ಮಳೆಯುಂಟಾಗಿದ್ದು, ಅದರಿಂದ ಹಾನಿಗೆ ಪರಿಹಾರ ಕೇಳಲಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ರೈತರು , ಕಾರ್ಖಾನೆ ಮಾಲಿಕರೊಂದಿಗೆ ನಡೆಸಿದ ಚರ್ಚೆಗಳ ಬಗ್ಗೆ ವಿವರಿಸಲಾಯಿತು. 11.25 ಇಳುವರಿಯಿರುವ ಕಬ್ಬು ಬೆಳೆಯ ಒಂದು ಟನ್ ಗೆ ( ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ) 3,300 ರೂ. ನೀಡುವ ತೀರ್ಮಾನಕ್ಕೆ ರೈತರು ಹಾಗೂ ಕಾರ್ಖಾನೆಯವರು ಸಮ್ಮತಿಸಿದ್ದಾರೆ ಎಂದರು.


Share this with Friends

Related Post