Fri. Mar 6th, 2026

ಕೆಇಎ: 973 ಹುದ್ದೆ ನೇಮಕಾತಿಗೆ ಡಿ.20ರಿಂದ ಲಿಖಿತ ಪರೀಕ್ಷೆ

Share this with Friends

ಬೆಂಗಳೂರು: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ವಿವಿಧ ಇಲಾಖೆ/ನಿಗಮಗಳಲ್ಲಿನ 973 ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಹೈದರಾಬಾದ್ ಕರ್ನಾಟಕ (ಹೆಚ್ ಕೆ) ಕೋಟಾ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಡಿ.20, 21, ಜನವರಿ 24 ಮತ್ತು ಫೆಬ್ರುವರಿ 22ರಂದು ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ 391 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಕೋಟಾ ಕ್ಲೇಮ್ ಮಾಡದವರಿಗೆ (ನಾನ್ ಹೆಚ್ ಕೆ)  ಜನವರಿ 10, 11, 12 ಮತ್ತು 25ರಂದು ವಿವಿಧ ಪರೀಕ್ಷೆಗಳು ನಡೆಯಲಿವೆ. ಇದರಲ್ಲಿ 582 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ ಕೆ ಹಾಗೂ ನಾನ್- ಹೆಚ್ ಕೆ – ಎರಡೂ ಪರೀಕ್ಷೆಗಳಲ್ಲಿ ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ ಮಾಡಲಾಗುತ್ತದೆ  ಎಂದು ಅವರು ವಿವರಿಸಿದ್ದಾರೆ.ತಾಂತ್ರಿಕ ಶಿಕ್ಷಣ, ಕೃಷಿ ಮಾರಾಟ‌, ಬಿಡಿಎ, ಬೆಂಗಳೂರು ಜಲಮಂಡಳಿ, ಕೆಎಸ್ ಡಿ ಎಲ್, ಕೆಕೆಆರ್ ಟಿಸಿ, ಆರ್ ಜಿಯುಎಚ್ಎಸ್, ಕೆಎಸ್ಎಸ್ಐಡಿಸಿ, ಶಾಲಾ ಶಿಕ್ಷಣ ಇತ್ಯಾದಿ ಇಲಾಖೆ/ನಿಗಮ- ಮಂಡಳಿಗಳ ವಿವಿಧ ದರ್ಜೆಯ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಪಿಜಿ ವೈದ್ಯಕೀಯ: ನ.21ರ ಬೆಳಿಗ್ಗೆ 9 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ನ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ನ.21ರಂದು ಬೆಳಿಗ್ಗೆ 9ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ವೆಬ್ ಸೈಟ್ ನಲ್ಲಿ ಶುಲ್ಕದ ವಿವರಗಳನ್ನು ಕೂಡ ಅಪ್ ಲೋಡ್ ಮಾಡಿದ್ದು ಅದನ್ನು ನೋಡಿಕೊಂಡೇ ಆಪ್ಷನ್ಸ್ ದಾಖಲಿಸುವುದು ಸೂಕ್ತ.‌ ಕೊನೆ ಗಳಿಗೆವರೆಗೆ ಎಷ್ಟು ಬಾರಿ ಬೇಕಾದರೂ ಆಪ್ಷನ್ಸ್ ಬದಲಿಸಬಹುದು. ಆದರೆ ಅಂತಿಮವಾಗಿ ದಾಖಲಿಸುವ ಆಪ್ಷನ್ ಗಳನ್ನು ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


Share this with Friends

Related Post