ದಾವಣಗೆರೆ: ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಗೊಂದಲ ಮೂಡಿದೆ ಆದರೆ ಮುಖ್ಯಮಂತ್ರಿ ಯಾರೆಂಬುದು ನಮಗೆ ಸಂಬಂಧವಿಲ್ಲ; ರೈತರ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು.
ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಕ್ಕೆ ಇವತ್ತು ಚಾಲನೆ ನೀಡಿ ಮಾತನಾಡಿದ ಅವರು, ಇದೇ 27, 28ರಂದು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ. ಡಿ.1 ಮತ್ತು 2ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಿಜೆಪಿ ರೈತ ಮೋರ್ಚಾ ಹೋರಾಟ ಮಾಡಲಿದೆ. ರೈತರು, ಕಬ್ಬು ಬೆಳೆಗಾರರು, ಮೆಕ್ಕ ಜೋಳ ಬೆಳೆಗಾರರ ಸಮಸ್ಯೆಗೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಸರಕಾರವನ್ನು ಎಚ್ಚರಿಸುವ ದೃಷ್ಟಿಯಿಂದ ಇಲ್ಲಿ ಹೋರಾಟಕ್ಕೆ ಚಾಲನೆ ಕೊಡಲಾಗುತ್ತಿದೆ ಎಂದರು.
ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸದೇ ಇರುವುದು ಅಕ್ಷಮ್ಯ ಅಪರಾಧ:
ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸದೇ ಇರುವುದು ಅಕ್ಷಮ್ಯ ಅಪರಾಧ. ರಾಜ್ಯದಲ್ಲಿರುವ ಅನಿಷ್ಟ ರೈತವಿರೋಧಿ ಕಾಂಗ್ರೆಸ್ ಸರಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ; ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥವಾಗಿಲ್ಲ.ಮೆಕ್ಕೆ ಜೋಳದ ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಲಕ್ಷ್ಮೇಶ್ವರದಲ್ಲಿ ಹೋರಾಟ ನಡೆಯುತ್ತಿದೆ. ನವಲಗುಂದದಲ್ಲಿ ರೈತ ಮುಖಂಡ ಶಂಕ್ರಣ್ಣ ಅಂಬಳಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬಾಗಲಕೋಟೆ, ಶಿವಮೊಗ್ಗ ಸೇರಿ ಅನೇಕ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಿದೆ. ಕೇಂದ್ರವು ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರಕಾರವು ಖರೀದಿ ಕೇಂದ್ರ ತೆರೆದಿಲ್ಲ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ತುಂಗಭದ್ರಾ ಅಣೆಕಟ್ಟಿಗೆ 32 ಕ್ರಸ್ಟ್ ಗೇಟ್ ಅಳವಡಿಸದೇ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಸುತ್ತಲಿನ ರೈತರು ಎರಡನೇ ಬೆಳೆ ಬೆಳೆಯಲು ಆಗುತ್ತಿಲ್ಲ; ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಅನ್ಯಾಯ ಮಾಡಿದೆ. ಅವರಿಗೆ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ರಾಜ್ಯದ ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೇ ಇಡೀ ಸಚಿವಸಂಪುಟವು ದೆಹಲಿಯಲ್ಲಿ ಕುಳಿತಿದೆ. ಮುಖ್ಯಮಂತ್ರಿಗಳು ಮೆಕ್ಕೆಜೋಳ ಖರೀದಿ ಕೇಂದ್ರದ ಕುರಿತು ಚರ್ಚಿಸಲು ಸಭೆ ಕರೆದರೆ ಕೃಷಿ ಸಚಿವರು ದೆಹಲಿಯಲ್ಲಿದ್ದರು ಎಂದು ಟೀಕಿಸಿದರು.
ತಾತ್ಕಾಲಿಕ ಸಿಎಂ ಬೇಡ;
ಹಂಗಾಮಿ ಮುಖ್ಯಮಂತ್ರಿ, ತಾತ್ಕಾಲಿಕ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕಾಗಿಲ್ಲ; ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೋ, ಇನ್ಯಾರು ಸಿಎಂ ಆಗುತ್ತಾರೋ ಎಂಬುದು ರಾಜ್ಯದ ಜನರಿಗೆ ಆಸಕ್ತಿ ಇಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನ ಪ್ರಾರಂಭಕ್ಕೆ ಮುಂಚಿತವಾಗಿ ರೈತರ ಜ್ವಲಂತ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಮತ್ತು ಸರಕಾರ ಬೇಕೆಂಬ ಅಪೇಕ್ಷೆ ಜನರದು ಎಂದು ತಿಳಿಸಿದರು.
ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಡಿ. ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ?ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ತಮ್ಮ ಸಮಸ್ಯೆಯನ್ನು ಬೆಂಗಳೂರಿನಲ್ಲೋ, ದೆಹಲಿಯಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಅಸಹಾಯಕರಾಗಿ ಮಾತು..
ಪಾಪ ಮಲ್ಲಿಕಾರ್ಜುನ ಖರ್ಗೆಯವರ ಮಾತು ಕೇಳಿದರೆ ಅಯ್ಯೋ ಅನಿಸುತ್ತದೆ ಎಂದ ಅವರು, 50 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು ಮೊನ್ನೆ ಅಸಹಾಯಕರಾಗಿ ಮಾತನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಭವಿಷ್ಯವನ್ನು ರಾಜ್ಯದ ಜನರು ತೀರ್ಮಾನ ಮಾಡುವುದಿಲ್ಲ. ಯಾವುದೋ ವಿದೇಶದಲ್ಲಿ ಕೂತ ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಾರೆ ಎಂದು ವಿಜಯೇಂದ್ರ ಅವರು ನುಡಿದರು.

