ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ಮಾತ್ರವಲ್ಲ ಅಭಿವೃದ್ಧಿ ಯೋಜನೆಗೂ ವೆಚ್ಚ ಮಾಡಲಾಗುತ್ತಿದೆ. ಮಹಿಳೆಯರು ಸಬಲರಾದರೆ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ,ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ ಅದಕ್ಕೆ ಇಂದಿನ ಕಾರ್ಯಕ್ರಮಗಳೇ ನಿದರ್ಶನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಹಾಗೂ ಮಕ್ಕಳ ದಿನಾಚರಣೆಯ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐಸಿಡಿಎಸ್ ಕಾರ್ಯಕ್ರಮಕ್ಕೆ 50 ವರ್ಷಗಳು ತುಂಬಿರುವುದು ಮೈಲುಗಲ್ಲು ಸಾಧನೆಯಾಗಿದೆ. ಇಂದಿರಾಗಾಂಧಿಯವರು, ತಾಯಿ ಮತ್ತು ಮಕ್ಕಳ ಮರಣ ತಡೆಗಟ್ಟಲು ಹಾಗೂ ಅವರಲ್ಲಿ ಅಪೌಷ್ಠಿಕತೆ ನಿವಾರಿಸುವ ಉದ್ದೇಶದಿಂದ ಇದನ್ನು ಜಾರಿ ಮಾಡಿದರು. ರಾಜ್ಯದಲ್ಲಿ 69,922 ಅಂಗನವಾಡಿ ಕೇಂದ್ರಗಳಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಈ ಕೇಂದ್ರಗಳಿಂದ ಲಾಭ ಪಡೆಯುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರು ಹಾಗೂ ಸಹಾಯಕರು ಪ್ರಾಮಾಣಿಕ ಸೇವೆಸಲ್ಲಿಸುತ್ತಿದ್ದು, ಮಕ್ಕಳ ಆರೈಕೆಯಲ್ಲಿ ನಿರತವಾಗಿರುವ ಎರಡನೇ ತಾಯಿಯಂತೆ. ಇದು ಉದಾತ್ತವಾದ ಕೆಲಸ. ಮಕ್ಕಳು ದೇಶದ ಮುಂದಿನ ಭವಿಷ್ಯ. ಐಸಿಡಿಎಸ್ ಕಾರ್ಯಕ್ರಮದಿಂದ ಶಿಶು ಹಾಗೂ ತಾಯಿಮರಣ ಗಣನೀಯವಾಗಿ ಕಡಿಮೆಯಾಗಿದೆ.ಮುಂದಿನ ದಿನಗಳಲ್ಲಿ ಮಕ್ಕಳು, ತಾಯಂದಿರ ಅಪೌಷ್ಟಿಕತೆ ತೊಲಗಿಸಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲಾಗುವುದು ಎಂದರು.
ಐಸಿಡಿಎಸ್ ಕೇಂದ್ರ ಸರ್ಕಾರದ ಕಾರ್ಯಕ್ರಮವಾದರೂ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಕೊಡುತ್ತಿದೆ. ಕೇಂದ್ರದಿಂದ 2700 ರೂ ಬಂದರೆ, ರಾಜ್ಯ ಸರ್ಕಾರ 8500 ಒದಗಿಸುತ್ತಿದೆ. ಇಡೀ ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಹೆಚ್ಚಿನ ಗೌರವಧನವನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ. ಐಸಿಡಿಎಸ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿರುವ ರಾಜ್ಯಗಳಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದರು.
ರಾಜ್ಯದ ಒಟ್ಟು 5000 ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ , ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ತರಗತಿಗಳನ್ನು ಇನ್ನೂ ಹೆಚ್ಚಿನ ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದು. ಮಹಿಳೆಯರ ರಕ್ಷಣೆ ಹಾಗೂ ಭದ್ರತೆಯನ್ನು ಖಾತ್ರಿಪಡಿಸುವ ‘ಅಕ್ಕಾ’ ಪಡೆಯನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ.ವಿವಿಧೋದ್ದೇಶ ಸಹಕಾರ ಸಂಘವನ್ನು ಪ್ರಾರಂಭಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ಇಲ್ಲಿಯವರೆಗೆ ಗ್ಯಾರಂಟಿಗಳಿಗೆ ಸರ್ಕಾರ 1 ಲಕ್ಷ ನಾಲ್ಕು ಸಾವಿರ ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಿದೆ.ಅಭಿವೃದ್ಧಿ ಯೋಜನೆಗಳಿಗೂ ಅನುದಾನದ ಕೊರತೆಯಿಲ್ಲ,ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರ ಕಣ್ಣು ತೆರೆಯಬೇಕು. ಬಿಜೆಪಿಯವರು, ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ವಿರೋಧಿಸಿದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಅಭಿವೃದ್ಧಿ ಯೋಜನೆಗೂ ವೆಚ್ಚ ಮಾಡಲಾಗುತ್ತಿದೆ. ಮಹಿಳೆಯರು ಸಬಲರಾದರೆ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದರು.
ಮಹಿಳಾ ಕಲ್ಯಾಣಕ್ಕಾಗಿ 95000 ಕೋಟಿ ರೂ. ಗಳು ಮೀಸಲು:
ಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ ಹೋಗಲಾಡಿಸಬೇಕು. ಈ ವರ್ಷದ ಬಜೆಟ್ ನಲ್ಲಿ 95000ಕೋಟಿ ರೂ. ಗಳನ್ನು ಮಹಿಳಾ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ಲಿಂಗ ತಾರಾತಮ್ಯ ಹೋಗಲಾಡಿಸಲು ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ, ಸಾಮಾಜಿಕ ಆರ್ಥಿಕ ಶಕ್ತಿ ನೀಡುತ್ತಿದೆ. ಜಾತಿ, ಲಿಂಗ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿಲ್ಲ. ಸಮಗ್ರ ಅಭಿವೃದ್ಧಿ ನಮ್ಮ ಗುರಿ. ಬಡವ ಬಲ್ಲಿದ ಎಂಬ ತಾರತಮ್ಯ ಹೋಗಲಾಡಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.

