Sat. Mar 7th, 2026

ವಾಚ್ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ರಾಜೀನಾಮೆಗೆ ಸಿದ್ದು,ನೀವೂ ಸಿದ್ದವಿದ್ದೀರಾ?: ಛಲವಾದಿ ನಾರಾಯಣಸ್ವಾಮಿಗೆ ಡಿಸಿಎಂ ಸವಾಲ್

Share this with Friends

ಬೆಂಗಳೂರು:ಪ್ರಚಾರಕ್ಕೆ ಮಾತನಾಡಬಾರದು, ಕನಿಷ್ಟ ಪರಿಜ್ಞಾನ ಇರಬೇಕು,ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ,ವಾಚ್ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದು, ನಿಮ್ಮ ಆರೋಪ ಸುಳ್ಳಾಗಿದ್ದರೆ ನೀವು ರಾಜೀನಾಮೆ ನೀಡುತ್ತೀರಾ ಎಂದು ಬಿಜೆಪಿಯ‌ ಛಲವಾದಿ ನಾರಾಯಣಸ್ವಾಮಿಗೆ ಡಿಸಿಎಂ  ಡಿ.ಕೆ. ಶಿವಕುಮಾರ್ ಸವಾಲೆಸೆದಿದ್ದಾರೆ‌

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅವರೇ ಹೋಗಿ ಲೋಕಾಯುಕ್ತದಲ್ಲಿ ಪರಿಶೀಲನೆ ಮಾಡಲಿ. ಅಲ್ಲಿ ಸಲ್ಲಿಸಿರುವ ಆದಾಯ ಅಫಿಡವಿಟ್ ಸಾರ್ವಜನಿಕ ದಾಖಲೆಯಾಗಿದ್ದು, ಅದನ್ನು ಅವರೂ ಪಡೆಯಬಹುದು.2018 ಹಾಗೂ 2023ರಲ್ಲಿ ತೋರಿಸಿಲ್ಲ ಎಂಬುದು ಅವರ ವಾದ, “ಅವರಿಗೇನು ಗೊತ್ತು? 2025 ರಲ್ಲೂ ಸಲ್ಲಿಕೆ ಮಾಡಿದ್ದೀನಲ್ಲಾ..?” ಎಂದು ತಿರುಗೇಟು ನೀಡಿದರು.

“ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ವಾಚ್ ಕದ್ದದ್ದೋ, ಕೊಂಡದ್ದೋ ಎಂಬ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ  “ಛಲವಾದಿ ನಾರಾಯಣಸ್ವಾಮಿ ಅವರಿಗೆ ಇನ್ನೂ ಅನುಭವವಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಮಾತನಾಡಬೇಕಾದರೆ ಕನಿಷ್ಟ ಪರಿಜ್ಞಾನ ಇರಬೇಕು. ಬರೀ ಪ್ರಚಾರಕ್ಕೆ ಮಾತನಾಡುವುದಲ್ಲ. ಅವರಿಗಿಂತ ಹೆಚ್ಚು ಜವಾಬ್ದಾರಿಯಿಂದ ನಾನು ವರ್ತಿಸುತ್ತೇನೆ. ಅವರೂ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕು ಎಂದರು.

ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ, “ಸದನದಲ್ಲೂ ಪ್ರಸ್ತಾಪಿಸಲಿ, ಬೇರೆ ಎಲ್ಲಾದರೂ ಪ್ರಸ್ತಾಪಿಸಲಿ. ಯಾರು ಬೇಡ ಎನ್ನುತ್ತಾರೆ. ದೇಶದೆಲ್ಲೆಡೆ ಚರ್ಚೆ ಮಾಡಲಿ. ನನ್ನ ದಾಖಲೆ ಅವರಿಗೆ ತೋರಿಸುವ ಅಗತ್ಯವಿಲ್ಲವಾದರೂ ನಾನು ಆ ವಾಚ್ ಕದ್ದಿದ್ದೇನೆ ಎಂದು ಹೇಳಿದ್ದಾರಲ್ಲ ಅದಕ್ಕೆ ತೋರಿಸಿರುವೆ” ಎಂದು ತಿರುಗೇಟು ನೀಡಿದರು.

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ:

ಇದಕ್ಕೂ ಮುನ್ನ ಗುರುವಾರ ಬೆಳಗ್ಗೆ ಟ್ವೀಟ್ ಮೂಲಕ ನಾರಾಯಣಸ್ವಾಮಿ ಅವರಿಗೆ ತಿರಗೇಟು ನೀಡಿದ ಶಿವಕುಮಾರ್ ಅವರು, “ಮಿಸ್ಟರ್ ನಾರಾಯಣಸ್ವಾಮಿ, ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್! ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲ. ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ..? “ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ” ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ..! ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ” ಎಂದು ಹರಿಹಾಯ್ದರು.


Share this with Friends

Related Post