ಬೆಂಗಳೂರು: ತೆರಿಗೆ ಸೋರಿಕೆ,ತೆರಿಗೆ ವಂಚನೆ ವಿರುದ್ಧು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ,ಬೋಗಸ್ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣಗಳ ಮೇಲೆ ನಿಗಾ ಇರಿಸಿ ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಿ ಎಂದು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ತೆರಿಗೆ ಸಂಗ್ರಹ ಇಲಾಖೆಗಳ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ವಾಣಿಜ್ಯ ತೆರಿಗೆ ಮತ್ತು ಅಬಕಾರಿ ತೆರಿಗೆ ಇಲಾಖೆಗೆ ನೀಡಿರುವ ಗುರಿ, ತಲುಪಿರವ ಪ್ರಮಾಣದ ಕುರಿತು ಅವಲೋಕನ ನಡೆಸಿದರು, ಟಾರ್ಗೆಟ್ ರೀಚ್ ಮಾಡುವಂತೆ ಸೂಚಿಸಿದರು.
ವಾಣಿಜ್ಯ ತೆರಿಗೆ:
• ವಾಣಿಜ್ಯ ತೆರಿಗೆ ಇಲಾಖೆಗೆ 2025-26 ನೇ ಹಣಕಾಸು ಸಾಲಿನಲ್ಲಿ ರೂ. 1,20,000 ಕೋಟಿ ಗುರಿಯನ್ನು ನಿಗದಿಪಡಿಸಲಾಗಿದೆ.
• ನವೆಂಬರ್ ಅಂತ್ಯದವರೆಗೆ ರೂ. 80 ಸಾವಿರ ಕೋಟಿ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ನಿವ್ವಳ ಸಂಗ್ರಹ ರೂ. 72131 ಕೋಟಿ ಮಾಡಲಾಗಿದ್ದು, ಸಾಧನೆ ಶೇಕಡಾವಾರು ಶೇ.90 ಸಾಧನೆ ಮಾಡಲಾಗಿದೆ. ಇದರಲ್ಲಿ ಜಿಎಸ್ಟಿ ರೂ. 53,522 ಕೋಟಿ, ಕೆಎಸ್ಟಿ ರೂ. 17,595 ಕೋಟಿ ಮತ್ತು ವೃತಿ ತೆರಿಗೆ1014 ಕೋಟಿ ಸಂಗ್ರಹಿಸಲಾಗಿದೆ.
• ಆರಂಭದ ಐದು ತಿಂಗಳಲ್ಲಿ ಎಪ್ರಿಲ್‌ನಿಂದ ಆಗಸ್ಟ್ವರೆಗೆ ಶೇ.12ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ. ಆದರೆ ಜಿಎಸ್‌ಟಿ ದರಗಳಲ್ಲಿ ಬದಲಾವಣೆ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಕಳೆದ ಮೂರು ತಿಂಗಳಲ್ಲಿ ಕೇವಲ ಶೇ.3ರಷ್ಟು ಬೆಳವಣಿಗೆ ದರವನ್ನು ಸಾಧ್ಯವಾಗಿದೆ.
• ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ನಿಗದಿತ ಗುರಿಯನ್ನು ಸಾಧಿಸಬೇಕು.
• ನವೆಂಬರ್ ಅಂತ್ಯದವರೆಗೆ ಸುಮಾರು 13 ಸಾವಿರ ತಪಾಸಣೆಗಳನ್ನು ಮಾಡಿದ್ದು, ತಪಾಸಣೆಯಿಂದ ರೂ. 3183 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ.
• ವಾಣಿಜ್ಯ ತೆರಿಗೆ ವಿಚಕ್ಷಣಾ ದಳ ತೆರಿಗೆ ಕಳ್ಳತನವನ್ನು ತಪ್ಪಿಸಲು ನಿರಂತರ ತಪಾಸಣೆಗಳನ್ನು ಕೈಗೊಳ್ಳಬೇಕು. ತೆರಿಗೆ ತಪ್ಪಿಸಲು ಯಾವುದೇ ಅವಕಾಶ ಇಲ್ಲದಂತೆ ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ಬಳಸಿಕೊಂಡು, ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಿ, ಅನಾಲಿಸಿಸ್ ವಿಭಾಗವನ್ನು ಬಲಪಡಿಸಬೇಕು.
• ಬೋಗಸ್ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣಗಳ ಮೇಲೆ ನಿಗಾ ಇರಿಸಿ ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚನೆ ನೀಡಿದರು.
ಅಬಕಾರಿ ತೆರಿಗೆ:
• 2025-26 ನೇ ಹಣಕಾಸು ಸಾಲಿನಲ್ಲಿ ರೂ. 43ಸಾವಿರ ಕೋಟಿ ಅಬಕಾರಿ ತೆರಿಗೆ ಗುರಿಯನ್ನು ನಿಗದಿಪಡಿಸಲಾಗಿದ್ದು, ನವೆಂಬರ್ವರೆಗೆ ರೂ.26,215 ಅಂತ್ಯದವರೆಗೆ ರೂ. ಕೋಟಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ.10.46ರಷ್ಟು ಬೆಳವಣಿಗೆ ದರವನ್ನು ಸಾಧಿಸಲಾಗಿದೆ.
• ನಿಗದಿತ ಗುರಿಯನ್ನು ಸಾಧಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

