ಬೆಂಗಳೂರು: ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮನುವಾದಿಗಳಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾ ಸಾಹೇಬ ಡಾ l.ಬಿ ಆರ್ ಅಂಬೇಡ್ಕರ್ ರವರ 69 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಹೆಚ್.ಡಿ.ಕುಮಾರಸ್ವಾಮಿ ಮನುವಾದಿಗಳಾಗಿದ್ದಾರೆ ಎನ್ನುವುದು ಅವರ ವರ್ತನೆಯಿಂದಲೇ ತಿಳಿಯುತ್ತದೆ,ಅವರು ಭಗವದ್ಗೀತೆಯನ್ನು ಶಾಲಾ ಪಠ್ಯಕ್ಕೆ ಸೇರಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದಿದ್ದಾರೆ ಇದನ್ನು ನೋಡಿದರೆ ಮನುವಾದಿಯಾಗಿರಯವುದರಲ್ಲಿ ಅನುಮಾನವಿಲ್ಲ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಅವರು ಮನುವಾದಿಗಳಾಗಿದ್ದಾರೆ ಎಂದರು.
ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ:
ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ ಗೌರವ ತಂದುಕೊಡಲು ಪ್ರಯತ್ನಿಸಿದರಲ್ಲದೇ, ದೇಶದಲ್ಲಿ ಸಮಾಜಿಕ ನ್ಯಾಯ ಸಿಗದವರ ಪರವಾಗಿ ಹೋರಾಟ ಮಾಡಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನ ಶಿಲ್ಪಿ. ಅವರು ದೇಶಕ್ಕೆ ಎಂಥ ಸಂವಿಧಾನದ ಅಗತ್ಯವಿದೆ ಎಂದು ಚಿಂತಿಸಿ , ಇತರೆ ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಿ ದೇಶಕ್ಕೆ ಅಗತ್ಯವಿರುವ ಸಂವಿಧಾನವನ್ನು ಕೊಟ್ಟಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯ ಬದಲಾವಣೆಯಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಶಾಲಾ ಕಾಲೇಜು ಮಕ್ಕಳಿಗೆ ಇದರ ಅರಿವು ಮೂಡಿಸಲು ಸಂವಿಧಾನ ಪೀಠಿಕೆಯನ್ನು ಬೋಧಿಸಲಾಗುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಬಾಧ್ಯತೆಗಳನ್ನು ನೀಡಿದೆ. ಸಂವಿಧಾನದ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು ಎಂಬ ಕಾರಣದಿಂದ ಸರ್ಕಾರ ಇದನ್ನು ಜಾರಿ ಮಾಡಿದೆ ಎಂದರು.
ಹಿಂದೂ ಧರ್ಮದಲ್ಲಿರುವ ಸಾಮಾಜಿಕ ವ್ಯವಸ್ಥೆಗೆ ರೋಸಿಹೋಗಿದ್ದರು:
ಪರಿನಿರ್ವಾಣ ದಿನದಂದು ನಾವು ಅಂಬೇಡ್ಕರ್ ಅವರನ್ನು ಸ್ಮರಿಸುವ ಕೆಲಸವನ್ನು ಮಾಡಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅವರ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಪಟ್ಟು, ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದೇನೆ ಎಂದು ಹೇಳಿದ್ದರು ಎಂದರು. ಹಿಂದೂ ಧರ್ಮದಲ್ಲಿರುವ ಸಾಮಾಜಿಕ ವ್ಯವಸ್ಥೆಗೆ ರೋಸಿಹೋಗಿ ಹೀಗೆ ಮಾಡಿದರು ಎಂದರು.

