ಬೆಂಗಳೂರು: “ಪಕ್ಷಕ್ಕಾಗಿ 45 ವರ್ಷಗಳ ಕಾಲ ಕಲ್ಲುಮುಳ್ಳಿನ ಹಾದಿಯಲ್ಲಿ ನಡೆದು, ತಳಮಟ್ಟದಿಂದ ಸಂಘಟನೆ ಮಾಡಿದ ನನಗೆ ಇಂದು ಅದೇ ಪಕ್ಷದಲ್ಲಿ ಅತೀವ ನೋವು ಮತ್ತು ಅಪಮಾನ ಎದುರಾಗಿದೆ” ಎಂದು ಹೇಳುವ ಮೂಲಕ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ರಾಜೀನಾಮೆಗೆ ಕಾರಣ ನೀಡಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದೂ ಭ್ರಷ್ಟಾಚಾರದ ಕಲೆ ಅಂಟಿಸಿಕೊಳ್ಳದ ತಮಗೆ, ಸ್ವಪಕ್ಷದವರೇ ನಿಂದಿಸಿರುವುದು ತೀವ್ರ ಆಘಾತ ತಂದಿದೆ ಎಂದು ಅವರು ಪತ್ರದಲ್ಲಿ ಅಸಮಧಾನ ತೋಡಿಕೊಂಡಿದ್ದಾರೆ.
ಅಲ್ಪಸಂಖ್ಯಾತ ನಾಯಕತ್ವದ ಕುರಿತು ಪಕ್ಷದ ವರಿಷ್ಠರ ಮೌನವೇ ಜಬ್ಬಾರ್ ಅವರ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ರಾಜ್ಯದ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರಿಗೆ ಸಾರ್ವಜನಿಕವಾಗಿ ಏಕವಚನದಲ್ಲಿ ಸಂಬೋಧಿಸಿ ಅವಮಾನಿಸಿದಾಗಲೂ, ಪಕ್ಷದ ಉನ್ನತ ನಾಯಕರು ಅದನ್ನು ಒಂದು ‘ಸಣ್ಣ ವಿಷಯ’ ಎಂಬಂತೆ ನಿರ್ಲಕ್ಷಿಸಿದ್ದು ತಮಗೆ ಮತ್ತು ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಅವರು ವಿಷಾದಿಸಿದ್ದಾರೆ. ನಿಷ್ಠಾವಂತ ನಾಯಕರಿಗೆ ಬೆಲೆ ಸಿಗದ ಕಡೆ ಇರಲು ಮನಸ್ಸಿಲ್ಲ ಎಂದು ಅವರು ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಉಪಚುನಾವಣೆಯ ಈ ನಿರ್ಣಾಯಕ ಸಮಯದಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದರೂ ತಮ್ಮನ್ನು ಪ್ರಚಾರ ಕಾರ್ಯದಿಂದ ವ್ಯವಸ್ಥಿತವಾಗಿ ದೂರ ಇಟ್ಟಿರುವುದು ಜಬ್ಬಾರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. “ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಗಲಿ ಎಂದು ಆಶಿಸಿದ್ದೇ ನಾನು ಮಾಡಿದ ತಪ್ಪೇ?” ಎಂದು ಪ್ರಶ್ನಿಸಿರುವ ಅವರು, ತಮ್ಮ ಪ್ರಾಮಾಣಿಕತೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸಂಶಯ ವ್ಯಕ್ತಪಡಿಸಿದ ಕೆಲವು ಮುಖಂಡರ ನಡೆಯಿಂದ ತಮಗೆ ಅತೀವ ಮನನೊಂದಿದೆ ಎಂದು ಹೇಳಿದ್ದಾರೆ.
ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ಕಾರ್ಯಕರ್ತರನ್ನು ಬದಿಗೆ ಸರಿಸುವ ಪ್ರಯತ್ನಗಳು ಈಗಿನ ಕಾಂಗ್ರೆಸ್ನಲ್ಲಿ ನಡೆಯುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ, ಕೇವಲ ಪಕ್ಷದ ಕೆಲವು ನಾಯಕರ ನಡವಳಿಕೆ ಮತ್ತು ಸಿದ್ಧಾಂತಗಳಿಗೆ ವಿರುದ್ಧವಾದ ನಡೆಗಳಿಂದ ಬೇಸತ್ತು ಈ ಸ್ವಯಂಪ್ರೇರಿತ ರಾಜೀನಾಮೆ ನೀಡುತ್ತಿರುವುದಾಗಿ ಅಬ್ದುಲ್ ಜಬ್ಬಾರ್ ಸ್ಪಷ್ಟಪಡಿಸಿದ್ದಾರೆ.

