ಬೆಂಗಳೂರು: ದೀರ್ಘಕಾಲದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಹಾಗೂ ಜಿವಿಕೆ ಇಎಂಆರ್ಐ (GVK EMRI) ಗ್ರೀನ್ ಹೆಲ್ತ್ ಸರ್ವೀಸಸ್ ಸಂಸ್ಥೆ ವಿಫಲವಾಗಿರುವುದನ್ನು ಖಂಡಿಸಿ, ರಾಜ್ಯದ ‘108 ಆರೋಗ್ಯ ಕವಚ’ ಆಂಬುಲೆನ್ಸ್ ಸಿಬ್ಬಂದಿಗಳು ಅಕ್ಟೋಬರ್ 14 ರಿಂದ ರಾಜ್ಯಾದ್ಯಂತ ಸಾಮೂಹಿಕ ಕರ್ತವ್ಯ ಗೈರುಹಾಜರಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಅಕ್ಟೋಬರ್ 15 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘ ಜಂಟಿ ಪ್ರಕಟಣೆಯಲ್ಲಿ ಎಚ್ಚರಿಸಿದೆ.
ಲಿಖಿತ ಭರವಸೆ ಈಡೇರದಿದ್ದಕ್ಕೆ ಆಕ್ರೋಶ:
ಆರೋಗ್ಯ ಸಚಿವರ ಸೂಚನೆಯ ಮೇರೆಗೆ ಸೆಪ್ಟೆಂಬರ್ 30 ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಸಭೆ ನಡಾವಳಿಗಳ ಮೂಲಕ ಲಿಖಿತ ಒಪ್ಪಿಗೆ ನೀಡಲಾಗಿತ್ತು. ಆರೋಗ್ಯ ಕವಚ ಯೋಜನೆಗೆ ಮೀಸಲಿರುವ ಒಟ್ಟು 174 ಕೋಟಿ ರೂ. ಅನುದಾನವನ್ನು (ರಾಜ್ಯ ಸರ್ಕಾರದ 164 ಕೋಟಿ ರೂ. ಮತ್ತು ರಾಷ್ಟ್ರೀಯ ಹೆಲ್ತ್ ಮಿಷನ್ನ 10 ಕೋಟಿ ರೂ.) ಬಳಸಿಕೊಂಡು ಇಎಂಟಿ (EMT) ಹಾಗೂ ಪೈಲಟ್ಗಳಿಗೆ ಜೇಷ್ಠತೆ ಆಧಾರದ ಮೇಲೆ ಏಕರೂಪ ವೇತನ ಪರಿಷ್ಕರಣೆ ಮಾಡುವುದಾಗಿ ಅಧಿಕಾರಿಗಳು ಒಪ್ಪಿದ್ದರು. ಆದರೆ, ಅಕ್ಟೋಬರ್ 7 ರಂದು ನಡೆದ ಸಭೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಈ ಭರವಸೆಗಳನ್ನು ಕಾರ್ಯರೂಪಕ್ಕೆ ತರಲು ವಿಫಲರಾಗಿದ್ದಾರೆ ಎಂದು ಸಂಘಟನೆ ದೂರಿದೆ.
ಪ್ರಮುಖ ಬೇಡಿಕೆಗಳು ಇಲ್ಲಿವೆ:
ವೇತನ ಪರಿಷ್ಕರಣೆ: ನೇಮಕಾತಿ ಆದೇಶದಂತೆ ಪ್ರತಿವರ್ಷ ವಾರ್ಷಿಕ ಹೆಚ್ಚುವರಿ ವೇತನ (Annual Increment) ನೀಡಿ ವೇತನವನ್ನು ಪರಿಷ್ಕರಿಸಬೇಕು ಮತ್ತು ಜೇಷ್ಠತೆ (Seniority) ಆಧಾರದ ಮೇಲೆ ವೇತನ ನಿಗದಿಪಡಿಸಬೇಕು.
ಕೆಲಸದ ಅವಧಿ ಮತ್ತು ಶಿಫ್ಟ್: ಪ್ರಸ್ತುತ ಇರುವ ಗೊಂದಲದ ಸಮಯ ಬದಲಾಯಿಸಿ, ದಿನಕ್ಕೆ 3 ಪಾಳಿಗಳಾಗಿ (ಬೆಳಗ್ಗೆ 8 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ರಾತ್ರಿ 8 ಮತ್ತು ರಾತ್ರಿ 8 ರಿಂದ ಬೆಳಗ್ಗೆ 8) ಕರ್ತವ್ಯದ ಅವಧಿಯನ್ನು ನಿಗದಿಪಡಿಸಬೇಕು.
ವಿಮೆ ಸೌಲಭ್ಯ: ಪ್ರಸ್ತುತ ವೇತನ ಖಾತೆಯನ್ನು ಆಕ್ಸಿಸ್ (Axis) ಬ್ಯಾಂಕ್ಗೆ ಬದಲಾಯಿಸಿ, ಅಪಘಾತದಲ್ಲಿ ಸಾವಿಗೀಡಾದ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದ ಸಿಬ್ಬಂದಿ ಕುಟುಂಬಕ್ಕೆ 50 ಲಕ್ಷ ರೂ. ಡೆತ್ ಇನ್ಶೂರೆನ್ಸ್ ಸೌಲಭ್ಯ ಕಲ್ಪಿಸಬೇಕು.
ಮೂಲಸೌಕರ್ಯ: ಎಲ್ಲಾ ಲೊಕೇಶನ್ಗಳಲ್ಲಿ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಹಾಗೂ ಆಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಒದಗಿಸಬೇಕು.
ಏಕರೂಪ ವಲಯ: ವಲಯವಾರು ವಿಂಗಡಣೆ ಮಾಡಿ ತಾರತಮ್ಯದಿಂದ ನಿಗದಿಪಡಿಸಿರುವ ಇಂದಿನ ಕನಿಷ್ಠ ವೇತನ ಕ್ರಮವನ್ನು ರದ್ದುಗೊಳಿಸಿ, ಏಕರೂಪ ವಲಯ ವ್ಯವಸ್ಥೆ ತರಬೇಕು.
ಸಾರ್ವಜನಿಕರ ತೊಂದರೆಗೆ ಸರ್ಕಾರವೇ ಹೊಣೆ:
ಅಕ್ಟೋಬರ್ 14 ರ ರಾತ್ರಿ 10 ಗಂಟೆಯ ಶಿಫ್ಟ್ನಿಂದಲೇ ರಾಜ್ಯಾದ್ಯಂತ ಆಂಬುಲೆನ್ಸ್ ನೌಕರರು ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರುಹಾಜರಾಗಲಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕ ತುರ್ತು ವೈದ್ಯಕೀಯ ಸೇವೆಗೆ ತೊಂದರೆಯಾದಲ್ಲಿ ಅದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಇಎಂಆರ್ಐ ಸಂಸ್ಥೆಯೇ ನೇರ ಹೊಣೆಯಾಗಿರುತ್ತದೆ ಎಂದು ಸಂಘಟನೆಯ ಪದಾಧಿಕಾರಿಗಳಾದ ಪರಮಶಿವ, ಚಂದ್ರಣ್ಣ ಹಾಗೂ ತಿಮ್ಮಪ್ಪ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

