Tue. Oct 13th, 2026

ಯಲಹಂಕದಲ್ಲಿ ಯುವಜನರಿಗಾಗಿ ‘ರೆಡ್ ರಿಬ್ಬನ್ ರನ್’ 5K ಮ್ಯಾರಥಾನ್ 

Share this with Friends

ಬೆಂಗಳೂರು: ಯುವಜನರಲ್ಲಿ HIV/AIDS ಕುರಿತು ವೈಜ್ಞಾನಿಕ ಅರಿವು ಮೂಡಿಸುವ ಮತ್ತು ಸೋಂಕಿತರ ಮೇಲಿನ ತಾರತಮ್ಯ ನಿವಾರಿಸುವ ಉದ್ದೇಶದಿಂದ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ರೆಡ್ ರಿಬ್ಬನ್ ರನ್’ (Red Ribbon Run) 5K ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಗೇಟರ್ ಬೆಂಗಳೂರು ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನಾ ಕೋಶ (NSS), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಶೇಷಾದ್ರಿಪುರಂ ಕಾಲೇಜಿನ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಅರಿವು ಮೂಡಿಸುವುದೇ ಮುಖ್ಯ ಉದ್ದೇಶ:

ಯುವ ಪೀಳಿಗೆಯಲ್ಲಿ HIV/AIDS ಹರಡುವಿಕೆಯನ್ನು ತಡೆಗಟ್ಟಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳು, ಸೋಂಕಿನ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಕಳಂಕವನ್ನು ನಿವಾರಿಸುವ ಸಂದೇಶವನ್ನು ಸಾರುವುದು ಈ ಮ್ಯಾರಥಾನ್‌ನ ಪ್ರಮುಖ ಆಶಯವಾಗಿತ್ತು. ಯುವಜನರು ಆರೋಗ್ಯ ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲು ಈ ಕಾರ್ಯಕ್ರಮ ಪ್ರೇರಣೆ ನೀಡಿತು.

ವಿಜೇತರಿಗೆ ಬಹುಮಾನ ವಿತರಣೆ:

ಬೆಳಗ್ಗೆ 6:30ಕ್ಕೆ ಆರಂಭವಾದ ಈ 5K ಮ್ಯಾರಥಾನ್ ಸ್ಪರ್ಧೆಯಲ್ಲಿ ನೂರಾರು ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಯ ಮುಕ್ತಾಯದ ನಂತರ ಪುರುಷರ ವಿಭಾಗದಲ್ಲಿ ಮೂವರು ಹಾಗೂ ಮಹಿಳಾ ವಿಭಾಗದಲ್ಲಿ ಮೂವರು ಸಾಧಕ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್, ಬೆಂಗಳೂರು ನಗರದ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದಿನಿ, ಲಯನ್ ರಾಜು ಚಂದ್ರಶೇಖರ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಉಪನಿರ್ದೇಶಕ ಗೋವಿಂದರಾಜು, ಟಿಸಿಸಿ ಬೆಂಗಳೂರು ಬ್ಲಡ್ ಸೆಂಟರ್‌ನ ವ್ಯವಸ್ಥಾಪಕ ಗಿರೀಶ್ ಬುಡರಕಟ್ಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಸವಿತಾ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಸುರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಶೈಲ ಕುಮಾರ್, ಲಯನ್ ಎಸ್. ಮನೋಜ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಜಿಲ್ಲಾ ಮೇಲ್ವಿಚಾರಕ ಹನುಮಂತರಾಯ ಮತ್ತು ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

 


Share this with Friends

Related Post