Tue. Sep 29th, 2026

ಬೆಂಗಳೂರು: ಅಂಚೇಪಾಳ್ಯದಲ್ಲಿ ವೃದ್ಧನ ಬಲಿ ಪಡೆದಿದ್ದ ಕಾಡಾನೆ ಕೊನೆಗೂ ಬನ್ನೇರುಘಟ್ಟ ಅರಣ್ಯಕ್ಕೆ ವಾಪಸ್!

Share this with Friends

ಬೆಂಗಳೂರು: ನಗರದ ಹೊರವಲಯದ ಮೈಸೂರು ರಸ್ತೆ ಬಳಿಯ ಅಂಚೇಪಾಳ್ಯದಲ್ಲಿ ಸೋಮವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ವೃದ್ಧನನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಮರಳಿ ಕಾಡಿಗೆ ಓಡಿಸಿದ್ದಾರೆ. ಸುದೀರ್ಘ ಕಾರ್ಯಾಚರಣೆಯ ಬಳಿಕ ಒಂಟಿ ಸಲಗವನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ವಲಯಕ್ಕೆ ಕಳುಹಿಸಲಾಗಿದೆ.

ಥರ್ಮಲ್ ಡ್ರೋನ್ ಮೂಲಕ ತಡರಾತ್ರಿ ಕಾರ್ಯಾಚರಣೆ:

ಸೋಮವಾರ ಮುಂಜಾನೆ ಅಂಚೇಪಾಳ್ಯ ನಿವಾಸಿ ನಾಗರಾಜ್ (60) ಎಂಬುವವರನ್ನು ತುಳಿದು ಕೊಂದಿದ್ದ ಆನೆಯು, ಬಳಿಕ ಬಿ.ಎಂ. ಕಾವಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿತ್ತು. ಜನವಸತಿ ಪ್ರದೇಶದ ತೀರಾ ಹತ್ತಿರದಲ್ಲೇ ಆನೆ ಇದ್ದಿದ್ದರಿಂದ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿತ್ತು. ಸೋಮವಾರ ತಡರಾತ್ರಿ ಅರಣ್ಯ ಇಲಾಖೆಯ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಹೈಟೆಕ್ ಥರ್ಮಲ್ ಡ್ರೋನ್ ತಂತ್ರಜ್ಞಾನವನ್ನು ಬಳಸಿ ಆನೆಯ ಚಲನವಲನವನ್ನು ಪತ್ತೆ ಹಚ್ಚಿದರು.

ನಿರಂತರ ನಿಗಾ ವಹಿಸಿದ ಅಧಿಕಾರಿಗಳು, ಆನೆಗೆ ಯಾವುದೇ ತೊಂದರೆಯಾಗದಂತೆ ನಿಗದಿಪಡಿತ ಎಲಿಫೆಂಟ್ ಕಾರಿಡಾರ್ (ಆನೆ ಕಾರಿಡಾರ್) ಮಾರ್ಗದ ಮೂಲಕ ಯಶಸ್ವಿಯಾಗಿ ಬನ್ನೇರುಘಟ್ಟ ಅರಣ್ಯದೊಳಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಟುಂಬಕ್ಕೆ ₹20 ಲಕ್ಷ ಪರಿಹಾರ ಘೋಷಣೆ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ತಕ್ಷಣವೇ ಸರ್ಕಾರದ ವತಿಯಿಂದ ₹20 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಿಸಿದ್ದಾರೆ. ಮೃತ ನಾಗರಾಜ್ ಅವರು ಎಂದಿನಂತೆ ತಮ್ಮ ಮಗಳೊಂದಿಗೆ ವಾಕಿಂಗ್ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು. ಕಾಡಾನೆ ಕೊನೆಗೂ ಅರಣ್ಯಕ್ಕೆ ಮರಳಿರುವುದರಿಂದ ಮೈಸೂರು ರಸ್ತೆ ಹಾಗೂ ಕೆಂಗೇರಿ ಸುತ್ತಮುತ್ತಲಿನ ಅಂಚೇಪಾಳ್ಯದ ಜನತೆ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

 


Share this with Friends

Related Post