ಬೆಂಗಳೂರು: ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸುವ ಹಾಗೂ ಸಾರ್ವಜನಿಕ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿ.ವೈ. ವಿಜಯೇಂದ್ರ ಅವರು ರಾಜ್ಯಾದ್ಯಂತ ಹಮ್ಮಿಕೊಂಡಿರುವ”ಸೇವಾ ಸಂಕಲ್ಪ ಅಭಿಯಾನ”ದ ಅಧಿಕೃತ ಪ್ರವಾಸದ ವಿವರಗಳು ಪ್ರಕಟವಾಗಿವೆ. ಅಕ್ಟೋಬರ್ 1 ರಿಂದ ಆರಂಭವಾಗಲಿರುವ ಈ ಅಭಿಯಾನದಲ್ಲಿ ವಿವಿಧ ಜಿಲ್ಲೆಗಳ ಹತ್ತಾರು ವಿಧಾನಸಭಾ ಕ್ಷೇತ್ರಗಳಲ್ಲಿ ಸರಣಿ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದಿನಾಂಕವಾರು ಪ್ರವಾಸದ ಸಂಪೂರ್ಣ ವಿವರ ಇಲ್ಲಿದೆ:
ಅಕ್ಟೋಬರ್ 01 (ಕೋಲಾರ): ಪ್ರಸಿದ್ಧ ಕುರುಡುಮಲೈ ಶ್ರೀ ವಿನಾಯಕ ದೇವಸ್ಥಾನದ ದರ್ಶನದೊಂದಿಗೆ ಪ್ರವಾಸ ಆರಂಭಗೊಳ್ಳಲಿದ್ದು, ಬಂಗಾರಪೇಟೆ ಮತ್ತು ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಲಿದೆ.
ಅಕ್ಟೋಬರ್ 02 (ಚಿಕ್ಕಬಳ್ಳಾಪುರ): ಬಾಗೇಪಲ್ಲಿ ಹಾಗೂ ಶಿಡ್ಲಘಟ್ಟ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದು, ಗಾಂಧಿ ಜಯಂತಿ ಅಂಗವಾಗಿ ‘ಸ್ವಚ್ಛತಾ ಕಾರ್ಯಕ್ರಮ’ದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 03: ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಸ ಕಾರ್ಯಕ್ರಮ ನಿಗದಿಯಾಗಿದೆ.
ಅಕ್ಟೋಬರ್ 04 (ತುಮಕೂರು): ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ‘ನಮೋ ಸೇವಾಗಾಥ’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಕ್ಟೋಬರ್ 05 (ಹಾವೇರಿ): ರಾಣೇಬೆನ್ನೂರು ಮತ್ತು ಬ್ಯಾಡಗಿ ಕ್ಷೇತ್ರಗಳಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ.
ಅಕ್ಟೋಬರ್ 06 (ಧಾರವಾಡ): ಕುಂದಗೋಳ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ‘ವೀರಗಾಥಾ’ ಮತ್ತು ದೇಶ ಕಾಯುವ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಇರಲಿದೆ.
ಅಕ್ಟೋಬರ್ 07 (ಗದಗ): ನರಗುಂದ ಮತ್ತು ರೋಣ ಕ್ಷೇತ್ರಗಳಲ್ಲಿ ‘ಸೇವಾ ಜ್ಯೋತಿ ಯಾತ್ರೆ’ಯಲ್ಲಿ ವಿಜಯೇಂದ್ರ ಭಾಗವಹಿಸಲಿದ್ದಾರೆ.
ಅಕ್ಟೋಬರ್ 08 (ಬಾಗಲಕೋಟೆ): ಬಾದಾಮಿ ಮತ್ತು ಮುಧೋಳ ಕ್ಷೇತ್ರಗಳಲ್ಲಿ ‘ಬದಲಾವಣೆಯಾದ ಸ್ಥಳಗಳ ವೀಕ್ಷಣೆ’ (ಬದಲಾವಣೆ ಕಥೆ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 09 (ವಿಜಯಪುರ): ಮುದ್ದೇಬಿಹಾಳ ಹಾಗೂ ಸಿಂಧಗಿ ಕ್ಷೇತ್ರಗಳಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಸೇವಾ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 10: ಕಲಬುರಗಿ ಜಿಲ್ಲಾ ಪ್ರವಾಸದೊಂದಿಗೆ ಈ ಹಂತದ ಅಭಿಯಾನ ಮುಕ್ತಾಯಗೊಳ್ಳಲಿದೆ.

