ವಿಜಯಪುರ: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮುಖಾಮುಖಿ ಭೇಟಿಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿದ್ದ ಸಂಧಾನದ ಎಲ್ಲಾ ವದಂತಿಗಳಿಗೆ ಈಗ ಅಧಿಕೃತ ತೆರೆ ಬಿದ್ದಿದೆ. ಬಿ.ವೈ. ವಿಜಯೇಂದ್ರ ಅವರ ನಾಯಕತ್ವ ಬದಲಾವಣೆಯಾದ ಬಳಿಕವೇ ತಾವು ಮರಳಿ ಬಿಜೆಪಿಗೆ ಸೇರುವ ಕುರಿತು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ನಡೆದ ಮುಖಾಮುಖಿ ಭೇಟಿಯ ಕುರಿತು ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಅದೊಂದು ಆಕಸ್ಮಿಕ ಭೇಟಿಯಷ್ಟೇ. ಅಲ್ಲಿ ಕೇವಲ ಸೌಜನ್ಯದ ಕುಶಲೋಪರಿ ಮಾತುಕತೆ ನಡೆದಿದೆಯೇ ವಿನಃ ಯಾವುದೇ ರೀತಿಯ ಹೊಂದಾಣಿಕೆ ಮಾತುಕತೆಗಳು ನಡೆದಿಲ್ಲ” ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದರು.
‘ವೈಯಕ್ತಿಕವಾಗಿ ಹಾನಿ ಮಾಡಿದ್ದಾರೆ’
ಮಾತು ಮುಂದುವರಿಸಿದ ಯತ್ನಾಳ್, ಬಿ.ವೈ. ವಿಜಯೇಂದ್ರ ಅವರು ತಮಗೆ ವೈಯಕ್ತಿಕವಾಗಿ ಬಹಳಷ್ಟು ಹಾನಿ ಉಂಟುಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. “ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಯಾವುದೇ ಅನುದಾನ ಬರದಂತೆ ತಡೆದಿದ್ದರು. ನನ್ನನ್ನು ರಾಜಕೀಯವಾಗಿ ಹತ್ತಿಕ್ಕಲು ಮತ್ತು ಪ್ರತಿಸ್ಪರ್ಧಿ ಎಂದು ದ್ವೇಷಿಸಲು ಎಲ್ಲಾ ತಂತ್ರಗಳನ್ನು ನಡೆಸಲಾಗಿತ್ತು. ನನ್ನ ಪತ್ರಗಳನ್ನೂ ಹರಿದು ಹಾಕಲಾಗಿತ್ತು. ಅವರ ವಿರುದ್ಧ ನನಗೂ, ನನ್ನ ವಿರುದ್ಧ ಅವರಿಗೂ ವೈಯಕ್ತಿಕವಾಗಿ ದ್ವೇಷವಿದೆ. ಹೀಗಿರುವಾಗ ನಮ್ಮ ನಡುವೆ ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲ. ನಮ್ಮಿಬ್ಬರ ಮಧ್ಯೆ ಒಗ್ಗಟ್ಟಾಗಿದೆ ಎಂದು ಯಾರೇ ಪ್ರಚಾರ ಮಾಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರ ನಾಯಕತ್ವದ ಬದಲಾವಣೆಯೇ ನನ್ನ ಮೊದಲ ಆದ್ಯತೆ” ಎಂದು ಯತ್ನಾಳ್ ಗುಡುಗಿದ್ದಾರೆ.
ಸ್ಥಾನಮಾನ ಕೊಟ್ಟರೆ ಬಿಜೆಪಿ, ಇಲ್ಲದಿದ್ದರೆ ಜೆಸಿಬಿ!
ದೆಹಲಿ ಪ್ರವಾಸದ ಕುರಿತು ಮಾಹಿತಿ ನೀಡಿದ ಅವರು, ಸಂಸತ್ ಭವನದಲ್ಲಿ ನಡೆಯಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕಾಗಿ ಕೇಂದ್ರ ಸಚಿವರ ಆಹ್ವಾನದ ಮೇರೆಗೆ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಈ ಪ್ರವಾಸದಲ್ಲಿ ಯಾವುದೇ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಪಕ್ಷಕ್ಕೆ ಮರಳುವ ಕುರಿತು ಮಾತುಕತೆ ನಡೆಸುವುದಿಲ್ಲ. ಆದರೆ, ದೆಹಲಿ ಮಟ್ಟದಲ್ಲಿ ತಾವೂ ಮರಳಿ ಪಕ್ಷಕ್ಕೆ ಬರಬೇಕೆಂಬ ಚರ್ಚೆಗಳು ನಡೆಯುತ್ತಿರುವುದು ನಿಜ. ಪಕ್ಷದಲ್ಲಿ ತಮಗೆ ಸೂಕ್ತ ಮತ್ತು ಗೌರವಾನ್ವಿತ ಸ್ಥಾನಮಾನ ನೀಡಿದರೆ ಮಾತ್ರ ತಾವು ಬಿಜೆಪಿಗೆ ಮರಳುವುದಾಗಿ, ಇಲ್ಲದಿದ್ದರೆ ತಮ್ಮದೇ ಆದ ‘ಜೆಸಿಬಿ’ ದಾರಿ ಇದ್ದೇ ಇದೆ ಎಂದು ಮಾರ್ಮಿಕವಾಗಿ ನುಡಿದರು.

