Wed. Oct 21st, 2026

ರಾಜ್ಯಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಿನ ಜಾರಿ: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆದೇಶ

Share this with Friends

ಬೆಂಗಳೂರು: ರಾಜ್ಯದ ರಸ್ತೆಗಳು ಹಾಗೂ ಕಾಲುಗೇರಿಗಳಲ್ಲಿ ಪ್ಲಾಸ್ಟಿಕ್ ಕಸದ ರಾಶಿಗಳು ಹೆಚ್ಚಾಗುತ್ತಿರುವುದು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳು ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಬೀರುತ್ತಿರುವ ಗಂಭೀರ ದುಷ್ಪರಿಣಾಮಗಳ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ತೀವ್ರ ಕಳಕಳಿಯ ಹಿನ್ನೆಲೆಯಲ್ಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ರಾಜ್ಯದ ಎಲ್ಲಾ ಇಲಾಖೆಗಳು, ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ಒಳಗೊಂಡ ಅಧಿಕೃತ ಟಿಪ್ಪಣಿಯನ್ನು ಹೊರಡಿಸಿದ್ದಾರೆ.

ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 5 ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು 2016 (2021 ರ ತಿದ್ದುಪಡಿ) ಅನ್ವಯ, ಕ್ಯಾರಿ ಬ್ಯಾಗ್ ಸೇರಿದಂತೆ 120 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಎಲ್ಲಾ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣೆ ಹಾಗೂ ಬಳಕೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ತಳಮಟ್ಟದಿಂದಲೇ ಜಾರಿಗೆ ತರಲು ಇಲಾಖೆಗಳ ಸಮನ್ವಯ ಅಗತ್ಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಖ್ಯ ಕಾರ್ಯದರ್ಶಿಗಳ ಪ್ರಮುಖ ಸೂಚನೆಗಳು:

ಸ್ಥಳೀಯ ಸಂಸ್ಥೆಗಳ ಮೂಲಕ ದಂಡ ವಿಧಿಸುವಿಕೆ: ಬಿಬಿಎಂಪಿ, ನಗರ ಪಾಲಿಕೆಗಳು, ಪುರಸಭೆಗಳು ಹಾಗೂ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್‌ಗಳ ಮೂಲಕ ರಸ್ತೆ ಹಾಗೂ ಕಾಲುಗೇರಿಗಳಲ್ಲಿ ಪ್ಲಾಸ್ಟಿಕ್ ಕಸ ವಿಲೇವಾರಿ ಮಾಡುವುದನ್ನು ತಡೆಯಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ತಕ್ಷಣವೇ ದಂಡ ವಿಧಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕು.

ಉತ್ಪಾದಕರು ಮತ್ತು ಮಾರಾಟಗಾರರ ಮೇಲೆ ನಿಗಾ: ಏಕ ಬಳಕೆಯ ಪ್ಲಾಸ್ಟಿಕ್ ತಯಾರಕರು ಹಾಗೂ ದೊಡ್ಡ ಮಟ್ಟದ ಮಾರಾಟಗಾರರ ಮೇಲೆ ಕಟ್ಟುನಿಟ್ಟಾದ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಅಧೀನ ಇಲಾಖೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಸಾರ್ವಜನಿಕ ಜಾಗೃತಿ ಅಭಿಯಾನ: ಸಾರ್ವಜನಿಕ ಶಿಕ್ಷಣ ಮತ್ತು ಮಾಧ್ಯಮಗಳ ಸಹಯೋಗದೊಂದಿಗೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದ ಕುರಿತು ವ್ಯಾಪಕ ಜಾಗೃತಿ ಮೂಡಿಸಲು ಜನಾಂದೋಲನ ರೂಪಿಸಬೇಕು.

ಸರ್ಕಾರಿ ಕಚೇರಿಗಳಲ್ಲೇ ಮೊದಲು ನಿಷೇಧ: ಸರ್ಕಾರದ ಎಲ್ಲಾ ಇಲಾಖೆಗಳ ವ್ಯಾಪ್ತಿಯ ಕಚೇರಿಗಳು ಮತ್ತು ಘಟಕಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಬೇಕು.

ಈ ನಿಟ್ಟಿನಲ್ಲಿ ಆಯಾ ಇಲಾಖೆಗಳು ಮತ್ತು ಜಿಲ್ಲಾಡಳಿತಗಳು ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳ ಕುರಿತು ಮುಂದಿನ 15 ದಿನಗಳ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗಳು ತಮ್ಮ ಆದೇಶದಲ್ಲಿ ಗಡುವು ವಿಧಿಸಿದ್ದಾರೆ. ಈ ಪತ್ರದ ಪ್ರತಿಯನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ರವಾನಿಸಿ, ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಲು ಸೂಚಿಸಲಾಗಿದೆ.

 


Share this with Friends

Related Post