ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವ ನಿರ್ಧಾರವು ವಿರೋಧ ಪಕ್ಷಗಳ ನಾಯಕರಲ್ಲೂ ಭಾವುಕತೆ ಮೂಡಿಸಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದೇ ಇದ್ದರೂ, ಸಿದ್ದರಾಮಯ್ಯ ಅವರೊಂದಿಗಿನ ದಶಕಗಳ ಕಾಲದ ಆತ್ಮೀಯ ಒಡನಾಟವನ್ನು ಸ್ಮರಿಸಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.”ಅವರು ಅಧಿಕಾರ ಬಿಟ್ಟು ಇಳಿದಾಗ ನನಗೆ ತೀವ್ರ ನೋವುಂಟಾಗಿದೆ. ಅವರ ಗತ್ತು ಮತ್ತು ಗಾಂಭೀರ್ಯ ಮುಖ್ಯಮಂತ್ರಿ ಹುದ್ದೆಗೆ ಒಂದು ವಿಶೇಷ ಗೌರವ ತಂದುಕೊಟ್ಟಿತ್ತು” ಎಂದು ಬಿ.ಸಿ. ಪಾಟೀಲ್ ಬರೆದುಕೊಂಡಿದ್ದಾರೆ.
ಬಿ.ಸಿ. ಪಾಟೀಲ್ ಅವರು ಸಿದ್ದರಾಮಯ್ಯ ಅವರೊಂದಿಗಿನ ತಮ್ಮ ಹಳೆಯ ರಾಜಕೀಯ ದಿನಗಳನ್ನು ಮೆಲುಕು ಹಾಕಿದ್ದಾರೆ:
ವಿರೋಧ ಮರೆತ ನಾಯಕ: “ನಾನು ಅವರನ್ನು ಪೊಲೀಸ್ ಅಧಿಕಾರಿಯಾಗಿದ್ದಾಗಿನಿಂದಲೂ ನೋಡಿದ್ದೇನೆ. 2004 ರಿಂದ ಅವರೊಂದಿಗೆ ಶಾಸಕನಾಗಿ ಕೆಲಸ ಮಾಡಿದ್ದೇನೆ. 2006ರಲ್ಲಿ ಅವರು ಕಾಂಗ್ರೆಸ್ ಸೇರಿ ಉಪಚುನಾವಣೆಗೆ ಸ್ಪರ್ಧಿಸಿದಾಗ ನಾನು ಅವರನ್ನು ವಿರೋಧಿಸಿದ್ದೆ. ಆದರೆ 2008ರಲ್ಲಿ ನಾನು ಕಾಂಗ್ರೆಸ್‌ಗೆ ಬಂದಾಗ, ಅವರು ಅದಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ ನನ್ನ ಎಲ್ಲಾ ಚುನಾವಣೆಗಳಲ್ಲೂ ಸಹಾಯ ಮಾಡಿದ್ದರು” ಎಂದು ಸ್ಮರಿಸಿದ್ದಾರೆ.
ಆತ್ಮೀಯತೆಯ ‘ಬಿಸಿ’ ಕರೆ: “ನನ್ನನ್ನು ಅತ್ಯಂತ ಹತ್ತಿರದಿಂದ ‘ಬಿಸಿ’ ಎಂದೇ ಸಿದ್ದರಾಮಯ್ಯ ಕರೆಯುತ್ತಿದ್ದರು. ನನ್ನ ಮನೆಗೆ ಅವರು ಎಷ್ಟು ಬಾರಿ ಬಂದಿದ್ದಾರೋ ಗೊತ್ತಿಲ್ಲ, ಕರೆದಾಗಲೆಲ್ಲ ಬಂದು ಪ್ರೀತಿ ಹಂಚುತ್ತಿದ್ದರು” ಎಂದು ಭಾವುಕರಾಗಿದ್ದಾರೆ.
ಕ್ಷೇತ್ರದ ಜನತೆ ಎಂದಿಗೂ ಮರೆಯದ ನೀರಾವರಿ ಕೊಡುಗೆ
2013ರ ಚುನಾವಣೆಯಲ್ಲಿ ನಾನು ಸೋತಿದ್ದ ಸಂದರ್ಭದಲ್ಲೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನನ್ನ ಕೋರಿಕೆಗೆ ಸ್ಪಂದಿಸಿ, ನನ್ನ ಕ್ಷೇತ್ರಕ್ಕೆ ನಾಲ್ಕು ಪ್ರಮುಖ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿದ್ದರು. ಇದನ್ನು ನಾನು ಮತ್ತು ನನ್ನ ಕ್ಷೇತ್ರದ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
2023ರ ನಂತರ ನಾನು ಅವರನ್ನು ಭೇಟಿಯಾಗಿರಲಿಲ್ಲ. ಆದರೆ ಒಮ್ಮೆ ದೆಹಲಿಯಲ್ಲಿ ಭೇಟಿಯಾದಾಗ ಅತ್ಯಂತ ಪ್ರೀತಿ-ವಿಶ್ವಾಸದಿಂದ ಮಾತನಾಡಿ ಬೆನ್ನು ತಟ್ಟಿದ್ದರು ಎಂದು ಆ ಕ್ಷಣವನ್ನು ನೆನೆದಿದ್ದಾರೆ.
ಇತಿಹಾಸಕಾರ, ಅರ್ಥಶಾಸ್ತ್ರಜ್ಞನಿಗೆ ಆಯುರಾರೋಗ್ಯ ಸಿಗಲಿ
ಸಿದ್ದರಾಮಯ್ಯ ಅವರನ್ನು ಚಾಣಾಕ್ಷ, ಇತಿಹಾಸಕಾರ, ಅರ್ಥಶಾಸ್ತ್ರಜ್ಞ ಮತ್ತು ನೇರ ನಿಷ್ಠುರ ನುಡಿಯ ಹೃದಯವಂತ ಎಂದು ಬಣ್ಣಿಸಿರುವ ಬಿ.ಸಿ. ಪಾಟೀಲ್, “ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ. ಮುಂದಿನ ದಿನಗಳಲ್ಲಿ ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ಭಾಗ್ಯ ಕರುಣಿಸಲಿ. ಅವರು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ, ಮುಂಬರುವ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ ಮುಂದುವರಿಯಲಿ” ಎಂದು ಹಾರೈಸಿದ್ದಾರೆ.

