Thu. Nov 19th, 2026

ಬೆಂಗಳೂರಿನ ಹಸಿರು ಹೊದಿಕೆ ಹೆಚ್ಚಿಸಲು ಬಿಡಿಎ ಹೆಜ್ಜೆ: ಕೆಂಪೇಗೌಡ ಬಡಾವಣೆಯ ರಾಜಕಾಲುವೆ ಬಫರ್ ವಲಯದಲ್ಲಿ ಮಿಯಾವಾಕಿ ಅರಣ್ಯ ಅಭಿವೃದ್ಧಿ

Share this with Friends

ಬೆಂಗಳೂರು: ನಗರದ ಹಸಿರು ಹೊದಿಕೆಯನ್ನು ಹೆಚ್ಚಿಸುವ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮಹತ್ವದ ಉಪಕ್ರಮವನ್ನು ಕೈಗೊಂಡಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ (NPKL) ರಾಜಕಾಲುವೆ ಬಫರ್ ವಲಯದಲ್ಲಿ ಬಿಡಿಎ ಅರಣ್ಯ ವಿಭಾಗದ ವತಿಯಿಂದ ಜಪಾನ್ ಮಾದರಿಯ ‘ಮಿಯಾವಾಕಿ’ (Miyawaki) ದಟ್ಟ ಅರಣ್ಯ ನೆಡುತೋಪನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ.

ಈ ನೂತನ ಹಸಿರು ವಲಯದ ಪ್ರಗತಿಯನ್ನು ವೀಕ್ಷಿಸಲು ಬಿಡಿಎ ಅರಣ್ಯ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಇನ್ಫೋಸಿಸ್ ಸಿಎಸ್‌ಆರ್ (Infosys CSR) ತಂಡದ ಪ್ರತಿನಿಧಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೆಡಲಾಗಿರುವ ಸಸಿಗಳ ಬೆಳವಣಿಗೆ, ಅವುಗಳ ನಿರ್ವಹಣೆ, ನೀರಿನ ವ್ಯವಸ್ಥೆ ಹಾಗೂ ನೆಡುತೋಪಿನ ಪ್ರಸ್ತುತ ಸ್ಥಿತಿಗತಿಗಳ ಕುರಿತು ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿದರು. ಸಸಿಗಳು ಅತ್ಯಂತ ಆರೋಗ್ಯಕರವಾಗಿ ಬೆಳೆಯುತ್ತಿರುವ ಬಗ್ಗೆ ಉಭಯ ತಂಡಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

ಏನಿದು ಯೋಜನೆಯ ವಿಶೇಷತೆ ಹಾಗೂ ಉದ್ದೇಶ?

ನಗರೀಕರಣದ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ನೈಸರ್ಗಿಕ ಪರಿಸರವನ್ನು ಮರುಸ್ಥಾಪಿಸಲು ಮತ್ತು ಜಲಮೂಲಗಳನ್ನು ಸಂರಕ್ಷಿಸಲು ಬಿಡಿಎ ಈ ವಿಶೇಷ ಯೋಜನೆ ರೂಪಿಸಿದೆ. ರಾಜಕಾಲುವೆಗಳ ಸುತ್ತಮುತ್ತಲಿನ ಬಫರ್ ವಲಯಗಳು ಒತ್ತುವರಿಯಾಗದಂತೆ ತಡೆಯುವ ಜೊತೆಗೆ, ಆ ಜಾಗವನ್ನು ಹಸಿರು ವಲಯವನ್ನಾಗಿ ಪರಿವರ್ತಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕಡಿಮೆ ಜಾಗದಲ್ಲಿ ಅತಿ ವೇಗವಾಗಿ ಮತ್ತು ದಟ್ಟವಾಗಿ ಬೆಳೆಯುವ ಸ್ಥಳೀಯ ಪ್ರಭೇದದ ಸಸಿಗಳನ್ನು ಈ ಮಿಯಾವಾಕಿ ತಂತ್ರಜ್ಞಾನದ ಮೂಲಕ ಬೆಳೆಸಲಾಗುತ್ತಿದೆ.

ಇನ್ಫೋಸಿಸ್ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯ ಸಹಯೋಗದೊಂದಿಗೆ ಬಿಡಿಎ ಅರಣ್ಯ ವಿಭಾಗವು ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಮುಂದಿನ ದಿನಗಳಲ್ಲಿ ಈ ನೆಡುತೋಪು ಪೂರ್ಣ ಪ್ರಮಾಣದಲ್ಲಿ ಬೆಳೆದಾಗ ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುದ್ಧ ಗಾಳಿ, ಅಂತರ್ಜಲ ಮಟ್ಟ ವೃದ್ಧಿ, ತಾಪಮಾನ ನಿಯಂತ್ರಣ ಮತ್ತು ಸ್ಥಳೀಯ ಜೀವವೈವಿಧ್ಯದ (ಪಕ್ಷಿ, ಚಿಟ್ಟೆ ಸಂಕುಲ) ಬೆಳವಣಿಗೆಗೆ ಇದು ಅತ್ಯಂತ ಪೂರಕವಾಗಲಿದೆ.

 


Share this with Friends

Related Post