Thu. Nov 19th, 2026

ಅಣ್ಣನ ಆರೋಗ್ಯ ವಿಚಾರಿಸಲು ರಾಷ್ಟ್ರೋತ್ಥಾನ ಆಸ್ಪತ್ರೆಗೆ ಮತ್ತೊಮ್ಮೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್

Share this with Friends

ಬೆಂಗಳೂರು: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ಗುರುವಾರ ಮತ್ತೊಮ್ಮೆ ಭೇಟಿ ನೀಡಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಹಿರಿಯ ಸಹೋದರ ಸತ್ಯನಾರಾಯಣರಾವ್ ಗಾಯಕ್ವಾಡ್ ಅವರ ಆರೋಗ್ಯ ವಿಚಾರಿಸಿದರು.

ಆಸ್ಪತ್ರೆಯಲ್ಲಿ ಸಹೋದರನಿಗೆ ನೀಡಲಾಗುತ್ತಿರುವ ಚಿಕಿತ್ಸಾ ವಿಧಾನ ಮತ್ತು ವೈದ್ಯರ ಆರೈಕೆಗೆ ಸತ್ಯನಾರಾಯಣರಾವ್ ಅವರು ಉತ್ತಮವಾಗಿ ಸ್ಪಂದಿಸುತ್ತಿರುವುದನ್ನು ಕಂಡು ರಜನಿಕಾಂತ್ ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಸಹೋದರನ ಆರೋಗ್ಯದಲ್ಲಿ ಕಂಡುಬಂದಿರುವ ಚೇತರಿಕೆ ಮತ್ತು ಸುಧಾರಣೆಯ ಬಗ್ಗೆ ಅವರು ತೀವ್ರ ಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇದೇ ವೇಳೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಕೆಲಹೊತ್ತು ಆತ್ಮೀಯವಾಗಿ ಮಾತನಾಡಿ, ಅಣ್ಣನಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಘಟನೆಯ ಹಿನ್ನೆಲೆ:

ಇತ್ತೀಚೆಗೆ ಮನೆಯಲ್ಲಿ ಪೂಜೆ ನೆರವೇರಿಸುವ ವೇಳೆ ಸ್ಟೂಲ್‌ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ ಸತ್ಯನಾರಾಯಣರಾವ್ ಅವರಿಗೆ ತಲೆಯ ಭಾಗದಲ್ಲಿ ಗಂಭೀರ ಪೆಟ್ಟಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಆರ್.ಆರ್. ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲಿಸಿ, ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಈ ವಿಷಯ ತಿಳಿಯುತ್ತಿದ್ದಂತೆಯೇ ಕಳೆದ ನವೆಂಬರ್ 5ರಂದು ಕೂಡ ಚೆನ್ನೈನಿಂದ ದಿಢೀರ್ ಬೆಂಗಳೂರಿಗೆ ಆಗಮಿಸಿದ್ದ ರಜನಿಕಾಂತ್, ಆಸ್ಪತ್ರೆಗೆ ಭೇಟಿ ನೀಡಿ ಅಣ್ಣನ ಯೋಗಕ್ಷೇಮ ವಿಚಾರಿಸಿದ್ದರು. ಇದೀಗ ಎರಡು ವಾರಗಳ ಬಳಿಕ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಸತ್ಯನಾರಾಯಣರಾವ್ ಅವರು ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಳ್ಳುತ್ತಿರುವುದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Photo credit:Rashtrotthana Hospital

 


Share this with Friends

Related Post