ಬೆಂಗಳೂರು: ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಭಿವೃದ್ಧಿ ಮತ್ತು ಯಶಸ್ಸಿನ ಹಿಂದೆ ದಿನರಾತ್ರಿ ಶ್ರಮಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ ಪಾತ್ರ ಅತ್ಯಂತ ದೊಡ್ಡದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಬಣ್ಣಿಸಿದರು.
ಬಮೂಲ್ ಕೇಂದ್ರ ಕಚೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೊರಗುತ್ತಿಗೆ ಕಾರ್ಮಿಕರ ಗೌರವಾರ್ಪಣೆ ಮತ್ತು ಉಡುಗೊರೆ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. 2025-26ನೇ ಸಾಲಿನಲ್ಲಿ ಬಮೂಲ್ ಒಕ್ಕೂಟವು ಗಣನೀಯ ಲಾಭವನ್ನು ಗಳಿಸಿರುವ ಹಿನ್ನೆಲೆಯಲ್ಲಿ, ಈ ಯಶಸ್ಸಿನ ರುವಾರಿಗಳಾದ ಕಾರ್ಮಿಕರಿಗೆ ಯುಗಾದಿ ಹಬ್ಬದ ವಿಶೇಷ ಕೊಡುಗೆಯನ್ನು ನೀಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಡಿ.ಕೆ. ಸುರೇಶ್, “ಬಮೂಲ್ ಕೇವಲ ಒಂದು ಸಂಸ್ಥೆಯಲ್ಲ, ಅದು ಲಕ್ಷಾಂತರ ರೈತರು ಮತ್ತು ಸಾವಿರಾರು ಕಾರ್ಮಿಕರ ಬದುಕಿನ ಆಧಾರ. ಇಲ್ಲಿನ ದಿನಗೂಲಿ ಮತ್ತು ಹೊರಗುತ್ತಿಗೆ ಕಾರ್ಮಿಕರು ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಒತ್ತಡಗಳ ನಡುವೆಯೂ ಸಂಸ್ಥೆಯ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ನಿಮ್ಮ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಂಸ್ಥೆಯು ಲಾಭದ ಹಾದಿಯಲ್ಲಿದೆ ಎಂದರೆ ಅದಕ್ಕೆ ನಿಮ್ಮ ಕಠಿಣ ಪರಿಶ್ರಮವೇ ಮೂಲ ಕಾರಣ,” ಎಂದು ಕಾರ್ಮಿಕರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಒಕ್ಕೂಟದ ಕೇಂದ್ರ ಕಚೇರಿ, ಕನಕಪುರ ಹಾಲು ಉತ್ಪನ್ನಗಳ ಸಂಕೀರ್ಣ, ವಿವಿಧ ಶೀತಲ ಕೇಂದ್ರಗಳು ಹಾಗೂ ಶಿಬಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2,000ಕ್ಕೂ ಹೆಚ್ಚು ಹೊರಗುತ್ತಿಗೆ ಕಾರ್ಮಿಕರಿಗೆ ತಲಾ 10 ಸಾವಿರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ವಿತರಿಸಿ ಗೌರವಿಸಲಾಯಿತು. ಈ ಮೂಲಕ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಿದೆ.
ಮುಂದುವರಿದು ಮಾತನಾಡಿದ ಅವರು, “ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಒಕ್ಕೂಟದಲ್ಲಿ ಪಾರದರ್ಶಕ ಮತ್ತು ಕೆಲಸಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ನಂದಿನಿ ಉತ್ಪನ್ನಗಳ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಯ್ದುಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ನಂದಿನಿ ಬ್ರ್ಯಾಂಡ್ ಅನ್ನು ಜಾಗತಿಕವಾಗಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ, ಒಂದು ಕುಟುಂಬದಂತೆ ಕೆಲಸ ಮಾಡೋಣ,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಮೂಲ್‌ನ ನಿರ್ದೇಶಕರು, ಹಿರಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು. ಕಾರ್ಮಿಕರು ಹಬ್ಬದ ಸಂಭ್ರಮದಲ್ಲಿ ಉಡುಗೊರೆಗಳನ್ನು ಸ್ವೀಕರಿಸಿ ಹರ್ಷ ವ್ಯಕ್ತಪಡಿಸಿದರು.

