ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್ ಹೊಂದಲು ಅರ್ಹತೆ ಇಲ್ಲದಿದ್ದರೂ ಸೌಲಭ್ಯ ಪಡೆಯುತ್ತಿರುವ ಸುಮಾರು 14 ಲಕ್ಷ ಕಾರ್ಡ್‌ದಾರರನ್ನು ಹಂತ-ಹಂತವಾಗಿ ಎಪಿಎಲ್ (ಬಡತನ ರೇಖೆಗಿಂತ ಮೇಲಿರುವ) ಪಟ್ಟಿಗೆ ವರ್ಗಾಯಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿಗಳ ಪರಿಷ್ಕರಣೆ ಕುರಿತು ಸ್ಪಷ್ಟನೆ ನೀಡಿದರು. “ಸರ್ಕಾರದ ಮಾನದಂಡಗಳ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರಾಗಿರುವವರನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದು ಬಡವರ ಹಕ್ಕನ್ನು ರಕ್ಷಿಸುವ ಕ್ರಮವೇ ಹೊರತು, ಸೌಲಭ್ಯ ಕಡಿತಗೊಳಿಸುವ ಉದ್ದೇಶವಲ್ಲ. ನಿಜವಾದ ಅರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಯಾವುದೇ ಕಾರಣಕ್ಕೂ ಪಟ್ಟಿಯಿಂದ ತೆಗೆದುಹಾಕುವುದಿಲ್ಲ,” ಎಂದು ಅವರು ಭರವಸೆ ನೀಡಿದರು.
ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಅಥವಾ ತಪ್ಪಾಗಿ ಅರ್ಹರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದರೆ ಅಥವಾ ಎಪಿಎಲ್‌ಗೆ ವರ್ಗಾವಣೆಯಾಗಿದ್ದರೆ, ಅಂತಹ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಕೂಡಲೇ ಮನವಿ ಅಥವಾ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಪರಿಶೀಲಿಸಿ, ಅವರು ಅರ್ಹರು ಎಂದು ಕಂಡುಬಂದಲ್ಲಿ ಅಂತಹವರಿಗೆ ಮತ್ತೆ ಬಿಪಿಎಲ್ ಕಾರ್ಡ್ ಒದಗಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಸರ್ಕಾರದ ಈ ಕ್ರಮದಿಂದಾಗಿ ಅರ್ಹ ಬಡ ಕುಟುಂಬಗಳಿಗೆ ಸೌಲಭ್ಯಗಳು ಸರಿಯಾಗಿ ತಲುಪಲು ಸಾಧ್ಯವಾಗುತ್ತದೆ. ಅನರ್ಹರು ಸ್ವಯಂಪ್ರೇರಿತವಾಗಿ ಕಾರ್ಡ್‌ಗಳನ್ನು ವರ್ಗಾಯಿಸಿಕೊಳ್ಳಲು ಅಥವಾ ಇಲಾಖೆಯ ನಿಯಮಗಳಿಗೆ ಸಹಕರಿಸಲು ಅವರು ಮನವಿ ಮಾಡಿದರು.

