ಬೆಂಗಳೂರು: ವಿದ್ಯುತ್ ಗ್ರಾಹಕರಿಗೆ ಕಚೇರಿ ಅಲೆದಾಟ ಹಾಗೂ ಮಧ್ಯವರ್ತಿಗಳ ಕಾಟ ತಪ್ಪಿಸಲು ಮುಂದಾಗಿರುವ ಬೆಸ್ಕಾಂ, ವಿದ್ಯುತ್ ಸ್ಥಾವರ ಹಾಗೂ ಮೀಟರ್‌ಗಳ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ. ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಈ ಸೌಲಭ್ಯ ಜಾರಿಗೆ ತರಲಾಗಿದ್ದು, ಇಂತಹ ವಿನೂತನ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ವಿದ್ಯುತ್ ವಿತರಣಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬೆಸ್ಕಾಂ ಪಾತ್ರವಾಗಿದೆ.
ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್ ಅವರು ಈ ಹೊಸ ಡಿಜಿಟಲ್ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಜಿಬಿಎ (GBA) ವ್ಯಾಪ್ತಿಯಲ್ಲಿ ಇ-ಖಾತಾ ಮ್ಯೂಟೇಷನ್ ಹೊಂದಿರುವ ಮತ್ತು ಬೆಸ್ಕಾಂ ನಗರ ಭಾಗಗಳಲ್ಲಿ ಆಸ್ತಿ ಇ-ಪಿಐಡಿ (e-PID) ಹೊಂದಿರುವ ಅಥವಾ ಇಲ್ಲದ ಗ್ರಾಹಕರು ಇನ್ನು ಮುಂದೆ ಮನೆಯಲ್ಲೇ ಕುಳಿತು ಈ ಸೇವೆ ಪಡೆಯಬಹುದು. ಶೀಘ್ರದಲ್ಲೇ ಈ ಯೋಜನೆಯನ್ನು ಗ್ರಾಮೀಣ ಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಕಾಗದಪತ್ರ ಮುಕ್ತ (Paperless) ವ್ಯವಸ್ಥೆ
ಹಿಂದೆ ಹೆಸರು ಬದಲಾವಣೆ ಮಾಡಿಸಲು ಕ್ರಯಪತ್ರ, ನಿರಾಕ್ಷೇಪಣಾ ಪತ್ರ (NOC), ತೆರಿಗೆ ರಶೀದಿ ಹಾಗೂ ನಷ್ಟ ಪರಿಹಾರ ಬಾಂಡ್‌ಗಳಂತಹ ಸಾಲು ಸಾಲು ಭೌತಿಕ ದಾಖಲೆಗಳನ್ನು ಹಿಡಿದು ಕಚೇರಿಗಳಿಗೆ ಅಲೆಯಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಯಾವುದೇ ಭೌತಿಕ ಕಾಗದಪತ್ರಗಳ ಸಲ್ಲಿಕೆ ಅಗತ್ಯವಿರುವುದಿಲ್ಲ.
ಆನ್‌ಲೈನ್ ಪ್ರಕ್ರಿಯೆಯ ಪ್ರಮುಖ ಅಂಶಗಳು
ಸಂಪೂರ್ಣ ಡಿಜಿಟಲ್ ಅರ್ಜಿ: ಬೆಸ್ಕಾಂನ ಅಧಿಕೃತ RAPDRP Web Self-Service (WSS) ಪೋರ್ಟಲ್ ಮೂಲಕವೇ ಗ್ರಾಹಕರು ಅರ್ಜಿ ಸಲ್ಲಿಸಿ, ಇ-ಸ್ಟಾಂಪಿಂಗ್ ಹಾಗೂ ಇ-ಸೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಆನ್‌ಲೈನ್ ಪಾವತಿ: ರೂ. 100 ಅರ್ಜಿ ಶುಲ್ಕ ಹಾಗೂ ರೂ. 1,194 ಇ-ಸ್ಟಾಂಪ್/ಇ-ಸೈನ್ ಶುಲ್ಕ ಸೇರಿದಂತೆ ಒಟ್ಟು ಮೊತ್ತವನ್ನು ಪೋರ್ಟಲ್‌ನಲ್ಲೇ ಡಿಜಿಟಲ್ ಆಗಿ ಪಾವತಿಸಬೇಕು. ಕಚೇರಿಗಳಲ್ಲಿ ನಗದು ಸ್ವೀಕರಿಸಲಾಗುವುದಿಲ್ಲ.
ತಕ್ಷಣದ ದೃಢೀಕರಣ: ಆನ್‌ಲೈನ್‌ನಲ್ಲಿ ಡಿಜಿಟಲ್ ಸಹಿ ಪ್ರಕ್ರಿಯೆ ಮುಗಿದ ತಕ್ಷಣವೇ ಅಧಿಕೃತ ದೃಢೀಕರಣ ಪತ್ರ (OM) ಲಭ್ಯವಾಗಲಿದ್ದು, ಗ್ರಾಹಕರು ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರು ಮಾತನಾಡಿ, “ಪ್ರಾಯೋಗಿಕ ಹಂತದಲ್ಲೇ ಈಗಾಗಲೇ 31,000ಕ್ಕೂ ಹೆಚ್ಚು ಸಂಪರ್ಕಗಳ ಹೆಸರು ಬದಲಾವಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪ್ರಸ್ತುತ ವಾರಕ್ಕೆ 2,000ಕ್ಕೂ ಹೆಚ್ಚು ಅರ್ಜಿಗಳು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಕ್ಷಣಾರ್ಧದಲ್ಲಿ ವಿಲೇವಾರಿಯಾಗುತ್ತಿವೆ” ಎಂದು ಮಾಹಿತಿ ನೀಡಿದ್ದಾರೆ.
“ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಹಕರಿಗೆ ಪಾರದರ್ಶಕ ಹಾಗೂ ಉತ್ಕೃಷ್ಟ ಸೇವೆ ಸಲ್ಲಿಸುವುದು ನಮ್ಮ ಇಲಾಖೆಯ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಬೆಸ್ಕಾಂನ ಗ್ರಾಮಾಂತರ ಪ್ರದೇಶಗಳು ಹಾಗೂ ರಾಜ್ಯದ ಇನ್ನುಳಿದ ನಾಲ್ಕು ಎಸ್ಕಾಂಗಳಿಗೂ ಕಡ್ಡಾಯವಾಗಿ ವಿಸ್ತರಿಸಲಾಗುವುದು”ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ

