Thu. Aug 27th, 2026

ತ್ಯಾಜ್ಯದಿಂದ ಸ್ವಾತಂತ್ರ್ಯ” ವಿಶೇಷ ಆಂದೋಲನ: ಬೆಂಗಳೂರಿನಲ್ಲಿ 1.22 ಲಕ್ಷ ಮೆಟ್ರಿಕ್ ಟನ್ ಕಸ ಮುಕ್ತಿ

Share this with Friends

ಬೆಂಗಳೂರು: ರಾಜಧಾನಿಯನ್ನು ಕಸದ ಸಮಸ್ಯೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ “ತ್ಯಾಜ್ಯದಿಂದ ಸ್ವಾತಂತ್ರ್ಯ” ವಿಶೇಷ ಆಂದೋಲನವು ಅಭೂತಪೂರ್ವ ಯಶಸ್ಸು ಕಂಡಿದ್ದು, ಬೆಂಗಳೂರಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿದ್ದ ಬರೋಬ್ಬರಿ 1.22 ಲಕ್ಷ ಮೆಟ್ರಿಕ್ ಟನ್ ಕಸವನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮಗಳ ಪ್ರಗತಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೃಹತ್ ಪ್ರಮಾಣದ ಕಸದ ರಾಶಿಯನ್ನು ತೆರವುಗೊಳಿಸುವ ಮೂಲಕ ನಗರಕ್ಕೆ ಕಾಯಕಲ್ಪ ನೀಡಲಾಗುತ್ತಿದೆ. ಆದರೆ, ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಇದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಆಗಿದೆ ಎಂದು ಸ್ಪಷ್ಟಪಡಿಸಿದರು.

ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡದ ಬರೆ!

ನಗರದ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳೇ ಕಸದ ಪ್ರಮುಖ ತೊಟ್ಟಿಗಳಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಚಿವರು, ಆಸ್ತಿ ಮಾಲೀಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ:

ಸ್ವಚ್ಛತೆಗೆ ಮಾಲೀಕರೇ ಹೊಣೆ: ತಮ್ಮ ವ್ಯಾಪ್ತಿಯ ಖಾಲಿ ಸೈಟ್‌ಗಳನ್ನು ಯಾವುದೇ ಕಸ ಕಡ್ಡಿ ಇಲ್ಲದಂತೆ ಹಸಿರಾಗಿ ಮತ್ತು ಸ್ವಚ್ಛವಾಗಿಟ್ಟುಕೊಳ್ಳುವುದು ಆಯಾ ಆಸ್ತಿ ಮಾಲೀಕರ ಪ್ರಮುಖ ಆದ್ಯತೆಯಾಗಿದೆ.

ವೆಚ್ಚದ ಜೊತೆ ದಂಡ: ಪ್ರಾಧಿಕಾರ ನೀಡಿರುವ ಗಡುವು ಮುಗಿದಿರುವುದರಿಂದ, ಇನ್ನು ಮುಂದೆ ಮಾಲೀಕರು ಸ್ವಚ್ಛಗೊಳಿಸದ ಸೈಟ್‌ಗಳನ್ನು ಜಿಬಿಎ (GBA) ಸಿಬ್ಬಂದಿಯೇ ಜೆಸಿಬಿ ಮೂಲಕ ಕ್ಲೀನ್ ಮಾಡಲಿದ್ದಾರೆ. ಈ ಸ್ವಚ್ಛತಾ ಕಾರ್ಯಾಚರಣೆಯ ಸಂಪೂರ್ಣ ವೆಚ್ಚ ಹಾಗೂ ನಿಯಮ ಉಲ್ಲಂಘನೆಗಾಗಿ ಭಾರಿ ಮೊತ್ತದ ದಂಡವನ್ನು ಮಾಲೀಕರ ಆಸ್ತಿ ತೆರಿಗೆಯಲ್ಲೇ ವಸೂಲಿ ಮಾಡಲಾಗುತ್ತದೆ.

ಹಸಿರು ಬೆಂಗಳೂರು ನಿರ್ಮಾಣಕ್ಕೆ ಕರೆ

“ಬೆಂಗಳೂರನ್ನು ಸಾಂಕ್ರಾಮಿಕ ರೋಗಮುಕ್ತ ಮತ್ತು ಸುಂದರ ನಗರವನ್ನಾಗಿ ಪರಿವರ್ತಿಸಲು ಜಿಬಿಎ ನಿರಂತರವಾಗಿ ಶ್ರಮಿಸುತ್ತಿದೆ. ಸಾರ್ವಜನಿಕರು ಭಾರಿ ದಂಡ ಹಾಗೂ ಕ್ಲೀನಿಂಗ್ ವೆಚ್ಚದ ಶಿಕ್ಷೆಯಿಂದ ಪಾರಾಗಲು ತಕ್ಷಣವೇ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಹಸಿರು ಮತ್ತು ಸ್ವಚ್ಛ ಬೆಂಗಳೂರು ನಿರ್ಮಾಣದ ಈ ಬೃಹತ್ ಆಂದೋಲನದಲ್ಲಿ ಪ್ರತಿಯೊಬ್ಬ ಆಸ್ತಿ ಮಾಲೀಕರು ಜವಾಬ್ದಾರಿಯಿಂದ ಕೈಜೋಡಿಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದ್ದಾರೆ.

 

 


Share this with Friends

Related Post