ಬೆಂಗಳೂರು: ಗಾರ್ಡನ್ ಸಿಟಿಯಲ್ಲಿ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಮತ್ತು ಮಾಲೀಕರಿಲ್ಲದೆ ಕಾಡು ಬೆಳೆದು ನಿಂತಿರುವ ಖಾಲಿ ಸೈಟ್‌ಗಳಿಗೆ ಕಾಯಕಲ್ಪ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಂತಿಮವಾಗಿ ಕಠಿಣ ಕಾನೂನು ಅಸ್ತ್ರವನ್ನು ಪ್ರಯೋಗಿಸಿದೆ. “ತ್ಯಾಜ್ಯದಿಂದ ಸ್ವಾತಂತ್ರ್ಯ” ವಿಶೇಷ ಆಂದೋಲನದ ಅಡಿಯಲ್ಲಿ ನಗರದಾದ್ಯಂತ ಇರುವ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ನೀಡಲಾಗಿದ್ದ ಗಡುವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದವರ ಸೈಟ್‌ಗಳನ್ನು ಪ್ರಾಧಿಕಾರವೇ ಜೆಸಿಬಿ ಮೂಲಕ ಸ್ವಚ್ಛಗೊಳಿಸಿ, ಅದರ ಸಂಪೂರ್ಣ ವೆಚ್ಚದ ಜೊತೆಗೆ ಭಾರಿ ದಂಡವನ್ನು ಮಾಲೀಕರಿಗೆ ವಿಧಿಸುವ ಮಹತ್ವದ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರಿನಲ್ಲಿ ಗುರುವಾರ ಬೆಳಿಗ್ಗೆ ಈ ಬಿಗಿ ದಂಡಾಸ್ತ್ರ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಏನಿದು ಕಾರ್ಯಾಚರಣೆ? ಮಾಲೀಕರಿಗೆ ಬೀಳುವ ದಂಡ ಎಷ್ಟು?
ಬೆಂಗಳೂರಿನಲ್ಲಿ ಸಾವಿರಾರು ಖಾಲಿ ನಿವೇಶನಗಳಿದ್ದು, ಅವುಗಳನ್ನು ಮಾಲೀಕರು ಹಾಗೇ ಬಿಟ್ಟಿರುವುದರಿಂದ ಅಲ್ಲಿ ಕಸದ ರಾಶಿ ಬೀಳುತ್ತಿದೆ. ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ತುಂಬಿ ಸೊಳ್ಳೆಗಳ ಆವಾಸಸ್ಥಾನವಾಗಿ ಸಾರ್ವಜನಿಕ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದಕ್ಕೆ ಬ್ರೇಕ್ ಹಾಕಲು ಜಿಬಿಎ ಈ ಕ್ರಮ ಕೈಗೊಂಡಿದೆ:
ಜಿಬಿಎ ಇಂದಲೇ ಸ್ವಚ್ಛತೆ: ನಿಗದಿಪಡಿಸಿದ ಅವಧಿಯೊಳಗೆ ಸ್ವಚ್ಛಗೊಳಿಸದ ಖಾಲಿ ನಿವೇಶನಗಳನ್ನು ಜಿಬಿಎ ಸಿಬ್ಬಂದಿಯೇ ಸ್ವಚ್ಛಗೊಳಿಸುತ್ತಾರೆ.
ಮಾಲೀಕರಿಗೆ ಬಿಲ್ ಕಡ್ಡಾಯ: ಸೈಟ್ ಸ್ವಚ್ಛಗೊಳಿಸಲು ತಗುಲಿದ ಲೇಬರ್ ವೆಚ್ಚ, ಜೆಸಿಬಿ ಬಾಡಿಗೆ ಮತ್ತು ಕಸ ಸಾಗಾಟದ ಖರ್ಚನ್ನು ಆಯಾ ಆಸ್ತಿ ಮಾಲೀಕರ ಆಸ್ತಿ ತೆರಿಗೆಯ (Property Tax) ಖಾತೆಗೆ ನೇರವಾಗಿ ಲಿಂಕ್ ಮಾಡಿ ವಸೂಲಿ ಮಾಡಲಾಗುತ್ತದೆ.
ದಂಡದ ಶಿಕ್ಷೆ: ಸ್ವಚ್ಛತಾ ವೆಚ್ಚದ ಜೊತೆಗೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರಿ ಮೊತ್ತದ ದಂಡವನ್ನೂ ಸಹ ಆಸ್ತಿ ಮಾಲೀಕರು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.
ಕಾರ್ಯಾಚರಣೆಯ ನೇತೃತ್ವ ವಹಿಸಿದ ಹಿರಿಯ ಅಧಿಕಾರಿಗಳ ದಂಡು
ದೊಮ್ಮಲೂರಿನಲ್ಲಿ ನಡೆದ ಈ ಬಿಗಿ ಕಾರ್ಯಾಚರಣೆಯ ಸಂದರ್ಭದಲ್ಲಿ ಸಚಿವರೊಂದಿಗೆ ನಗರದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಪರಿಶೀಲನೆ ನಡೆಸಿದರು:
ಎನ್.ಎ. ಹ್ಯಾರೀಸ್ (ಬಿಡಿಎ ಅಧ್ಯಕ್ಷರು ಹಾಗೂ ಶಾಂತಿನಗರ ಶಾಸಕರು)
ಮಹೇಶ್ವರ್ ರಾವ್ (ಜಿಬಿಎ ಮುಖ್ಯ ಆಯುಕ್ತರು)
ಜಗದೀಶ್ ಜಿ. (ಕೇಂದ್ರ ನಗರ ಪಾಲಿಕೆಯ ಆಯುಕ್ತರು)
ವೆಂಕಟಾಚಲಪತಿ (ಅಭಿವೃದ್ಧಿ ಅಪರ ಆಯುಕ್ತರು)
“ನಗರದ ಸೌಂದರ್ಯ ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಣೆ ನಮ್ಮ ಮೊದಲ ಆದ್ಯತೆ. ನಾಗರಿಕರು ತಮ್ಮ ಖಾಲಿ ಸೈಟ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಪ್ರಾಧಿಕಾರವೇ ಕಠಿಣ ಕ್ರಮ ಕೈಗೊಳ್ಳಲಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ” ಎಂದು ಬೆಂಗಳೂರು ಮಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ಜಿಬಿಎ ತಂದಿರುವ ಈ ಹೊಸ ನಿಯಮವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ಗಳಿಸುತ್ತಿದ್ದು, ಸೈಟ್ ಮಾಲೀಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.

