Thu. Aug 27th, 2026

ಸಾರ್ವಜನಿಕ ಬಸ್‌ಗಳಲ್ಲಿ ಮಕ್ಕಳ ಸುರಕ್ಷತೆಗೆ ಬಿಗಿ ಕ್ರಮ: 1,340 ವಾಹನಗಳಲ್ಲಿ ಸಿಸಿಟಿವಿ, 2,394 ಬಸ್‌ಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಕೆ

Share this with Friends

ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸಾರಿಗೆ ಸಂಸ್ಥೆಗಳು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಿವೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಸಲ್ಲಿಸಿದ್ದ ಅರ್ಜಿಗೆ ಸಾರಿಗೆ ನಿಗಮವು ನೀಡಿರುವ ಅಧಿಕೃತ ಪ್ರತಿಯಲ್ಲಿ ಈ ಮಹತ್ವದ ಸುಧಾರಣೆಗಳು ಬೆಳಕಿಗೆ ಬಂದಿವೆ.

ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಕಲ್ಪಾಂಬೆಳ್ಳಿಯವರಾದ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ಕುರಿತು ಕೇಳಿದ್ದ ಮಾಹಿತಿಗೆ ಸಾರಿಗೆ ನಿಗಮದ ಕೇಂದ್ರ ಕಚೇರಿಯ ತಾಂತ್ರಿಕ ವಿಭಾಗವು ಈ ಕೆಳಗಿನ ವಿವರಗಳನ್ನು ಒದಗಿಸಿದೆ.

1,340 ಬಸ್‌ಗಳಲ್ಲಿ ಸಿಸಿಟಿವಿ ಕಡ್ಡಾಯ

ಪೋಕ್ಸೋ ಕಾಯ್ದೆಯ (POCSO Act) ನಿಯಮಾವಳಿಗಳ ಅನ್ವಯ ಪ್ರಯಾಣಿಕರ, ವಿಶೇಷವಾಗಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಸಾರಿಗೆ ನಿಗಮದ ಒಟ್ಟು 1,340 ಹೊಸ ಬಸ್‌ಗಳಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದು ಬಸ್‌ಗಳ ಒಳಗೆ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡಲು ನೆರವಾಗಲಿದೆ.

ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ (MoRTH) ಬಿಗಿ ಐಎಸ್-140 ಮಾನದಂಡದ ಪ್ರಕಾರ, ನಿಗಮದ ಒಟ್ಟು 2,394 ಹೊಸ ಬಸ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್ (GPS) ಸಾಧನಗಳನ್ನು ಅಳವಡಿಸಿ ವಾಹನಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಇದರ ಜೊತೆಗೆ, ಇದೇ 2,394 ಬಸ್‌ಗಳಲ್ಲಿ ಮಕ್ಕಳೂ ಸೇರಿದಂತೆ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಬಳಸಲು ‘ತುರ್ತು ಪ್ಯಾನಿಕ್ ಬಟನ್’ (Panic Button) ಸುರಕ್ಷಾ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಚೈಲ್ಡ್ ಹೆಲ್ಪ್‌ಲೈನ್ 1098 ಪ್ರದರ್ಶನ

ಬಾಲ ನ್ಯಾಯ ಕಾಯ್ದೆಯ (JJ Act) ಅನ್ವಯ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳು ಹಾಗೂ ಬಸ್‌ಗಳ ಒಳಭಾಗದಲ್ಲಿ ಮಕ್ಕಳ ತುರ್ತು ಸಹಾಯವಾಣಿ ಸಂಖ್ಯೆ ‘1098’ ಅನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ಪ್ರದರ್ಶಿಸಲು ತಾಂತ್ರಿಕ ನಿರ್ದೇಶನ ನೀಡಲಾಗಿದೆ.

ಅಪಘಾತ ನಿರ್ವಹಣೆಗೆ ಹ್ಯಾಮರ್ ದ್ವಾರ

ಒಂದೊಮ್ಮೆ ವಾಹನಗಳು ಅಪಘಾತಕ್ಕೀಡಾದಲ್ಲಿ ಪ್ರಯಾಣಿಕರು ತಕ್ಷಣವೇ ಹೊರಬರಲು ಅನುಕೂಲವಾಗುವಂತೆ ಕಿಟಕಿ ಗಾಜುಗಳನ್ನು ಒಡೆಯಲು ಬಸ್‌ಗಳಲ್ಲಿ ‘ಹ್ಯಾಮರ್’ (ಸುತ್ತಿಗೆ) ಇರಿಸಲಾಗಿದೆ. ಎಐಎಸ್-052 ನಿಯಮಾವಳಿಗಳ ಅನ್ವಯ ನಿಗದಿಪಡಿಸಿದ ಅಳತೆಯಲ್ಲೇ ತುರ್ತು ನಿರ್ಗಮನ ದ್ವಾರಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಾರಿಗೆ ನಿಗಮದ ತಾಂತ್ರಿಕ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post