ರಾಮನಗರ: ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಬಿಡದಿ ಇಂಟಿಗ್ರೇಟೆಡ್ ಟೌನ್ಶಿಪ್ ನಿರ್ಮಾಣ ಕಾರ್ಯ ಅಧಿಕೃತವಾಗಿ ವೇಗ ಪಡೆದುಕೊಂಡಿದೆ. ಯೋಜನೆಯ ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರವು ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.
ಮೊದಲ ಹಂತದಲ್ಲಿ ರಾಮನಗರ ಮತ್ತು ಹಾರೋಹಳ್ಳಿ ತಾಲೂಕು ವ್ಯಾಪ್ತಿಯ ಮೂರು ಪ್ರಮುಖ ಕಂದಾಯ ಗ್ರಾಮಗಳ ಒಟ್ಟು 518 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.
ಯಾವೆಲ್ಲಾ ಗ್ರಾಮಗಳ ಭೂಮಿ ಸ್ವಾಧೀನ?
ಯೋಜನಾ ವ್ಯಾಪ್ತಿಗೆ ಒಳಪಡುವ ಒಟ್ಟು 9 ಕಂದಾಯ ಗ್ರಾಮಗಳ ಪೈಕಿ, ಆರಂಭಿಕ ಹಂತವಾಗಿ ಬಿಡದಿ ಹೋಬಳಿಯ ಈ ಕೆಳಗಿನ ಮೂರು ಗ್ರಾಮಗಳ ಜಮೀನನ್ನು ಗುರುತಿಸಲಾಗಿದೆ:
ಕೆಂಪಯ್ಯನಪಾಳ್ಯ: ಇಲ್ಲಿ ಅತಿ ಹೆಚ್ಚು ಅಂದರೆ ಸುಮಾರು 367 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ.
ಮಂಡಲಹಳ್ಳಿ: ಈ ಗ್ರಾಮದ 70 ಎಕರೆ ಜಮೀನು ಒಳಪಟ್ಟಿದೆ.
ವಡೇರಹಳ್ಳಿ: ಹಾರೋಹಳ್ಳಿ ವ್ಯಾಪ್ತಿಯ ಈ ಗ್ರಾಮದ 61 ಎಕರೆ ಪ್ರದೇಶವನ್ನು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.
ಈ ಮೂರು ಗ್ರಾಮಗಳ ಒಟ್ಟು 754 ರೈತರ ಜಮೀನುಗಳು ಈ ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆಯ ವ್ಯಾಪ್ತಿಗೆ ಬರಲಿವೆ.
ಭೂಮಿ ಕಳೆದುಕೊಳ್ಳುವ ರೈತರಿಗೆ ಭರ್ಜರಿ ಪರಿಹಾರ ಪ್ಯಾಕೇಜ್
ಯೂಜನೆಗಾಗಿ ತಮ್ಮ ಕೃಷಿ ಭೂಮಿಯನ್ನು ಬಿಟ್ಟುಕೊಡುವ ಭೂಮಾಲೀಕರು ಮತ್ತು ರೈತರಿಗೆ ಸರ್ಕಾರ ಎರಡು ಪ್ರಮುಖ ಆಕರ್ಷಕ ಆರ್ಥಿಕ ಆಯ್ಕೆಗಳನ್ನು ಪ್ರಸ್ತಾಪಿಸಿದೆ:
ನಗದು ಪರಿಹಾರ: ಪ್ರತಿ ಎಕರೆ ಜಮೀನಿಗೆ ಕನಿಷ್ಠ 2.07 ಕೋಟಿ ರೂಪಾಯಿಯಿಂದ ಗರಿಷ್ಠ 2.5 ಕೋಟಿ ರೂಪಾಯಿವರೆಗೆ ನೇರ ನಗದು ಪರಿಹಾರವನ್ನು ನಿಗದಿಪಡಿಸಲಾಗಿದೆ.
ಅಭಿವೃದ್ಧಿಪಡಿಸಿದ ಭೂಮಿ: ನಗದು ಪರಿಹಾರ ಬೇಡದ ರೈತರು, ಒಟ್ಟು ವಶಪಡಿಸಿಕೊಂಡ ಭೂಮಿಯಲ್ಲಿ ಶೇಕಡಾ 50 ರಷ್ಟು ಅಭಿವೃದ್ಧಿಪಡಿಸಿದ (Developed) ವಸತಿ ಅಥವಾ ವಾಣಿಜ್ಯ ಜಮೀನನ್ನು ಮರಳಿ ಪಡೆಯುವ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಭೂಮಿ ಕಳೆದುಕೊಳ್ಳುವ ರೈತರು ತಮ್ಮ ಕ್ರಯಪತ್ರ, ವಿಭಾಗ ಪತ್ರ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಸಲ್ಲಿಸಿ ನಿರ್ದಿಷ್ಟ ಅವಧಿಯೊಳಗೆ ಪರಿಹಾರ ಪಡೆದುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ದೇಶದ ಮೊದಲ ‘AI ಸಿಟಿ’ ನಿರ್ಮಾಣದ ಗುರಿ
ಬಿಡದಿ ಬಳಿ ಸುಮಾರು 7,400ಕ್ಕೂ ಹೆಚ್ಚು ಎಕರೆ ವಿಶಾಲ ಪ್ರದೇಶದಲ್ಲಿ ಜಾಗತಿಕ ಮಟ್ಟದ ಸುಸಜ್ಜಿತ ಟೌನ್ಶಿಪ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಭಾರತದ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ (AI Driven Smart City) ಆಧುನಿಕ ತಂತ್ರಜ್ಞಾನ ನಗರಿಯಾಗಲಿದ್ದು, ‘ವರ್ಕ್-ಲೈವ್-ಪ್ಲೇ’ (ಕೆಲಸ, ವಾಸ ಮತ್ತು ಮನರಂಜನೆ) ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿದೆ. ಜಾಗತಿಕ ಕೈಗಾರಿಕೆಗಳು, ಕ್ರೀಡಾ ಮೂಲಸೌಕರ್ಯಗಳು ಮತ್ತು ಐಟಿ ಉದ್ಯಮಗಳಿಗೆ ಪೂರಕವಾಗಿ ಈ ಮೆಗಾ ಸಿಟಿಯನ್ನು ರೂಪಿಸಲಾಗುತ್ತಿದೆ.

